ಅಪಘಾತ: ಚಿತ್ರಕಲಾ ಶಿಕ್ಷಕ ಮೃತ್ಯು

ಕುಂದಾಪುರ, ಫೆ.11: ಹೆಮ್ಮಾಡಿ ಜಂಕ್ಷನ್ ಬಳಿ ಇಂದು ಬೆಳಗಿನ ಜಾವ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿತ್ರಕಲಾ ಶಿಕ್ಷಕ ಭೋಜು ಹಾಂಡ(58) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮುಂಬೈಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಖಾಸಗಿ ಬಸ್ ಭೋಜು ಹಾಂಡರ ಬೈಕಿಗೆ ಢಿಕ್ಕಿ ಹೊಡೆಯಿತು. ಇದರ ಪರಿಣಾಮ ಬೈಕ್ ಸವಾರ ಭೋಜು ಹಾಂಡ ಹಾಗೂ ಹಿಂಬದಿ ಕುಳಿತಿದ್ದ ಬಾಲಕಿ ಅರ್ಪಿತಾ (11) ಎಂಬವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡರು. ಭೋಜು ಹಾಂಡರನ್ನು ಮಣಿಪಾಲ ಹಾಗೂ ಅರ್ಪಿತಾಳನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಇವರಲ್ಲಿ ಭೋಜು ಹಾಂಡ ಚಿಕಿತ್ಸೆ ಫಲ ಕಾರಿಯಾಗದೆ ಮೃತಪಟ್ಟರು.
ಇವರು ಕೋಟೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಹಲವು ವರ್ಷಗಳಿಂದ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. 1996ರಲ್ಲಿ ಹಾಸನದಿಂದ ವರ್ಗಾ ವಣೆಗೊಂಡು ಕೋಟೇಶ್ವರ ಕಾಲೇಜಿನಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಇವರು, ಸುಮಾರು 21 ವರ್ಷಗಳ ಕಾಲ ಇದೇ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇವರು ಜಿಲ್ಲಾ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿ ದ್ದರು. ಮೃತರು ಪತ್ನಿ ವಸಂತಿ, ಮಕ್ಕಳಾದ ರೂಪಶ್ರೀ, ರಾಕೇಶ್, ರಾಜೇಶ್ ಅವರನ್ನು ಅಗಲಿದ್ದಾರೆ.





