ಕಲ್ಲು ಸಾಗಾಟದ ಲಾರಿಗಳಿಗೆ ಟ್ರಾಫಿಕ್ ಎಸ್ಸೈಯಿಂದ ದಂಡ: ಲಾರಿ ಮಾಲಕರಿಂದ ಠಾಣೆಯ ಮುಂದೆ ಪ್ರತಿಭಟನೆ

ಉಡುಪಿ, ಫೆ.11: ಕ್ವಾರೆ ಕಲ್ಲು ಸಾಗಿಸುತ್ತಿದ್ದ ನಾಲ್ಕು ಲಾರಿಗಳಿಗೆ ದಂಡ ವಿಧಿಸಿರುವ ಉಡುಪಿ ಸಂಚಾರಿ ಪೊಲೀಸ್ ಠಾಣೆಯ ಉಪನಿರೀಕ್ಷಕರ ಕ್ರಮ ವನ್ನು ವಿರೋಧಿಸಿ ಲಾರಿ ಮಾಲಕ ಹಾಗೂ ಚಾಲಕರು ಇಂದು ಠಾಣೆಯ ಮುಂದೆ ಲಾರಿಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು.
ನಗರದ ಬೀಡಿನಗುಡ್ಡೆಯಲ್ಲಿ ಕ್ವಾರೆ ಕಲ್ಲು ಸಾಗಿಸುತ್ತಿದ್ದ ಲಾರಿಗಳನ್ನು ಸಂಚಾರಿ ಪೊಲೀಸ್ ಉಪನಿರೀಕ್ಷಕ ವೆಂಕಟೇಶ್ ತಡೆದು ತಲಾ ಒಂದು ಸಾವಿರ ರೂ. ದಂಡ ವಿಧಿಸಿದ್ದರು. ಇದನ್ನು ವಿರೋಧಿಸಿ ಲಾರಿ ಮಾಲಕರು ಹಾಗೂ ಚಾಲಕರು ತಮ್ಮ 50ಕ್ಕೂ ಅಧಿಕ ಲಾರಿ ಹಾಗೂ ಟೆಂಪೊಗಳನ್ನು ಠಾಣೆಯ ಮುಂದೆ ನಿಲ್ಲಿಸಿ ಠಾಣಾಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದರು.
‘ನಿನ್ನೆ ಹಮ್ಮಿಕೊಳ್ಳಲಾದ ಧರಣಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಂಡ ವಿಧಿಸುವುದಿಲ್ಲ ಎಂಬ ಭರವಸೆ ನೀಡಿದರೂ ಯಾವುದೇ ಅಧಿಕಾರ ಇಲ್ಲದ ಟ್ರಾಫಿಕ್ ಎಸ್ಸೈ ರಾಯಲ್ಟಿಗಾಗಿ ದಂಡ ವಿಧಿ ಸಿರುವುದು ಖಂಡನೀಯ. ಅವರನ್ನು ಕೂಡಲೇ ಅಮಾನತುಗೊಳಿಸಬೇಕು. ಅಲ್ಲಿಯವರೆಗೆ ಇಲ್ಲಿಂದ ಕದಲುವುದಿಲ್ಲ. ನಮ್ಮನ್ನು ಬಂಧಿಸಿದರು ಕೂಡ ನಾವು ಹೆದರುವುದಿಲ್ಲ’ ಎಂದು ಸಂಘಟನೆಯ ಪ್ರಮುಖ ನಾಗೇಂದ್ರ ತಿಳಿಸಿದರು.
ಈ ಸಂಬಂಧ ಠಾಣೆಗೆ ಆಗಮಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣು ವರ್ಧನ್ ಪ್ರತಿಕ್ರಿಯಿಸಿ ಈ ಬಗ್ಗೆ ಲಿಖಿತವಾಗಿ ಮನವಿ ಬರೆದುಕೊಟ್ಟಲ್ಲಿ ಮುಂದೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಆದರೆ ಇದಕ್ಕೆ ಒಪ್ಪದ ಲಾರಿ ಮಾಲಕರು ಲಿಖಿತ ದೂರು ನೀಡದೆಯೇ ಅವರನ್ನು ಅಮಾ ನತುಗೊಳಿಸಬೇಕು. ಇಲ್ಲದಿದ್ದರೆ ಮುಂದೆ ಕಾನೂನು ಸುವ್ಯವಸ್ಥೆಗೆ ತೊಂದರೆ ಯಾಗಬಹುದು ಎಂದು ಮಾಲಕರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್, ಕಾರ್ಮಿಕ ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ, ಚಂದ್ರ ಪೂಜಾರಿ, ಪ್ರವೀಣ್, ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು.







