ಟೋಲ್ ಗೇಟ್ ವಿರುದ್ಧ ತಲಪಾಡಿ ಬಂದ್‌ಗೆ ನೀರಸ ಪ್ರತಿಕ್ರಿಯೆ
ಜಿಲ್ಲಾಧಿಕಾರಿ ಮಧ್ಯಸ್ಥಿಕೆಯಲ್ಲಿ ಮಾತುಕತೆ ಯಶಸ್ವೀ: ನಿರ್ಣಯಗಳಿಗೆ ಒಪ್ಪಿಗೆ
ಉಳ್ಳಾಲ,ಫೆ.11: ರಾಷ್ಟ್ರೀಯ ಹೆದ್ದಾರಿಯ ತಲಪಾಡಿಯಲ್ಲಿ ಟೋಲ್ ಸಂಗ್ರಹ ಆರಂಭಿಸಿರುವ ನವಯುಗ ಗುತ್ತಿಗೆ ಕಂಪನಿ ವಿರುದ್ಧ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮತ್ತು ಮಿತ್ರ ಸಂಘಟನೆಗಳು ಶನಿವಾರದಂದು ಕರೆದಿದ್ದ ತಲಪಾಡಿ,ಕೆ.ಸಿ ರೋಡ್ ಬಂದ್ ಪ್ರಕ್ರಿಯೆಯು ನೀರಸವಾಗಿದ್ದು ಈ ಮಧ್ಯೆ ಜಿಲ್ಲಾಧಿಕಾರಿ ಮಧ್ಯಸ್ಥಿಕೆಯಲ್ಲಿ ಟೋಲ್ ಅಧಿಕಾರಿಗಳು,ಹೋರಾಟಗಾರರ ಮಾತುಕತೆ ಯಶಸ್ವಿಯಾಗಿ ನಡೆದಿದ್ದು, ಈ ಸಂದರ್ಭದಲ್ಲಿ ಮಹತ್ವದ ನಿರ್ಣಯಗಳಿಗೆ ಅಂಗೀಕಾರ ದೊರಕಿದೆ.
ತೊಕ್ಕೊಟ್ಟಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಅವರು ಶನಿವಾರದಂದು ಕಾಂಗ್ರೆಸ್ ಹಾಗೂ ವಿವಿಧ ಸಂಘಟನೆಗಳು ಒಟ್ಟು ಸೇರಿ ಟೋಲ್ ನೀತಿ ವಿರೋಧಿಸಿ ತಲಪಾಡಿ,ಕೆ.ಸಿ ರೋಡ್ ಪ್ರದೇಶಗಳಲ್ಲಿ ಬಂದ್ ನಡೆಸಲಾಗುತ್ತಿದ್ದು ಅಂಗಡಿ ಮುಂಗಟ್ಟುಗಳು,ಸಾರಿಗೆ ಬಸ್ಸುಗಳು ಸ್ವಯಂ ಪ್ರೇರಿತವಾಗಿ ಬಂದ್ ನಡೆಸಲಾಗುವುದು ಎಂದು ಹೇಳಿದ್ದರು. ಆದರೆ ಶನಿವಾರ ಮುಂಜಾನೆಯೇ ಎಲ್ಲಾ ಅಂಗಡಿಮುಗ್ಗಟ್ಟುಗಳು ತೆರೆದಿದ್ದು ಎಲ್ಲಾ ಖಾಸಗಿ, ಸರಕಾರಿ ಬಸ್ಸುಗಳು ಎಂದಿನಂತೆಯೇ ಓಡಾಟ ನಡೆಸಿದ್ದವು.
ಪ್ರತಿಭಟನೆ ಹಿಂತೆಗೆತ:
ಶನಿವಾರದಂದು ತಲಪಾಡಿಯಲ್ಲಿ ಟೋಲ್ ಫ್ಲಾಝಾ ಸುತ್ತಮುತ್ತಲಿನ ಪ್ರದೇಶದಲ್ಲಿ ನಿಷೇಧಾಜ್ನೆಯನ್ನು ಹೇರಿ ಹೆಚ್ಚಿನ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಸಚಿವ ಯು.ಟಿ ಖಾದರ್ ಅವರ ಸೂಚನೆ ಮೇರೆಗೆ ಶನಿವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಕಛೇರಿಯಲ್ಲಿ ಟೋಲ್ ಅಧಿಕಾರಿಗಳು ಮತ್ತು ಹೋರಾಟಗಾರರ ನಡುವೆ ಮಾತುಕತೆ ನಡೆಯಲಿರುವ ನಿಟ್ಟಿನಲ್ಲಿ ಹೋರಾಟವನ್ನು ತಾತ್ಕಾಲಿವಾಗಿ ಕೈಬಿಟ್ಟಿದ್ದಾಗಿ ಹೋರಾಟಗಾರರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಮಧ್ಯಸ್ಥಿಕೆಯಲ್ಲಿ ಮಾತುಕತೆ ಸಂಧಾನ ಯಶಸ್ವಿ:
ಶನಿವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಟೋಲ್ ಹೋರಾಟಗಾರರ ಬಹುತೇಕ ಬೇಡಿಕೆಗಳು ಈಡೇರಿದ್ದು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ:
1 .ಟೋಲ್ ಫ್ಲಾಝಾದ 5 ಕಿ.ಮೀ ವ್ಯಾಪ್ತಿಯ ಸ್ಥಳೀಯ ಗ್ರಾಮಸ್ಥರಿಗೆ ಫೆ.25ರತನಕ ಟೋಲ್ ಫ್ರೀ ವ್ಯವಸ್ಥೆ ಮಾಡಲಾಗಿದೆ.(ಚುನಾವಣಾ ಗುರುತು ಚೀಟಿ ತೋರಿಸಬೇಕು) ಫೆ.25ರ ಒಳಗೆ ಸರ್ವೇ ನಡೆಸಿ ನವಯುಗ ಕಂಪೆನಿಯವರು ಸಭೆಯಲ್ಲಿ ಮಾಹಿತಿ ನೀಡ ತಕ್ಕದ್ದು.
2.ಇಪ್ಪತ್ತು ಕಿ.ಮೀ ಒಳಗೆ ಬರುವ ಎಲ್ಲಾ ನಾನ್-ಕಮರ್ಷಿಯಲ್ (ವೈಟ್ ಬೋರ್ಡ್)ವಾಹನಗಳಿಗೆ ಮಾಸಿಕ ರೂ.235ರಂತೆ ಮಾಸಿಕ ಪಾಸ್ ನೀಡುವುದು.
3.ಟೋಲ್‌ನ ಎಲ್ಲಾ ಸಿಬ್ಬಂದಿಗಳು ಸಮವಸ್ತ್ರದೊಂದಿಗೆ ಗುರುತಿನ ಚೀಟಿ ಹಾಕುವುದು.
4.ಬೆಳಗ್ಗಿನ ಅವಧಿಯಲ್ಲಿ ಟೋಲ್‌ನಲ್ಲಿ ಮಹಿಳಾ ಸಿಬ್ಬಂದಿಗಳನ್ನು ನೇಮಿಸಲು ವ್ಯವಸ್ಥೆ ಮಾಡುವುದು.
5.ಟೋಲ್‌ನಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯ ಗುಣ-ನಡತೆಯ ಬಗ್ಗೆ ಪೊಲೀಸರಿಂದ ಕ್ಲಿಯರೆನ್ಸ್ ಪಡೆಯುವುದು.
ಹೀಗೆ ಹೋರಾಟಗಾರರ ಬೇಡಿಕೆಯ ಒಟ್ಟು 9 ನಿರ್ಣಯಗಳನ್ನು ಟೋಲ್ ಅಧಿಕಾರಿಗಳು,ಸಚಿವ ಯು.ಟಿ ಖಾದರ್,ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ತೆಗೆದುಕೊಳ್ಳಲಾಯಿತು.





.jpg.jpg)



