ಛೇದಕ ಕ್ಷಿಪಣಿ ಪರೀಕ್ಷಾ ಉಡಾವಣೆ ಯಶಸ್ವಿ

ಹೊಸದಿಲ್ಲಿ, ಫೆ.11: ಭಾರತದ ಛೇದಕ ಕ್ಷಿಪಣಿಯ ಪರೀಕ್ಷಾ ಉಡಾವಣೆ ಒರಿಸ್ಸಾದ ಕಡಲತೀರದಲ್ಲಿ ಯಶಸ್ವಿಯಾಗಿ ನಡೆದಿದ್ದು ಇದರೊಂದಿಗೆ ಎರಡು ಹಂತದ ಪ್ರಕ್ಷೇಪಕ ಕ್ಷಿಪಣಿ ವ್ಯವಸ್ಥೆಯ ಅಭಿವೃದ್ಧಿ ಕಾರ್ಯದಲ್ಲಿ ಮಹತ್ತರವಾದ ಮೈಲುಗಲ್ಲೊಂದನ್ನು ಸಾಧಿಸಿದಂತಾಗಿದೆ.
ಮುಂಜಾನೆ ಸುಮಾರು 7:45ರ ಸಂದರ್ಭ ಅಬ್ದುಲ್ ಕಲಾಂ ದ್ವೀಪದಲ್ಲಿ ಪರೀಕ್ಷಾರ್ಥ ಪ್ರಯೋಗವನ್ನು ನಡೆಸಲಾಗಿದ್ದು ಪಿಡಿವಿ ಛೇದಕ ಹಾಗೂ ಎರಡು ಹಂತದ ನಿಯೋಜಿತ ಕ್ಷಿಪಣಿ- ಇವೆರಡೂ ಕಾರ್ಯ ನಿರ್ವಹಿಸುವ ಮೂಲಕ ಯಶಸ್ಸು ಸಾಧಿಸಲಾಗಿದೆ ಎಂದು ರಕ್ಷಣಾ ಸಂಶೋಧನೆ ಅಭಿವೃದ್ಧಿ ಸಂಸ್ಥೆಯ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಸುಮಾರು 2 ಸಾವಿರ ಕಿ.ಮೀ. ದೂರದ ಬಂಗಾಳಕೊಲ್ಲಿಯಲ್ಲಿ ನಿಲ್ಲಿಸಲಾಗಿದ್ದ ನೌಕೆಯೊಂದರಿಂದ ಹಾರಿಸಲಾದ ಪ್ರಕ್ಷೇಪಕ ಕ್ಷಿಪಣಿಯನ್ನು ಗುರಿಯಾಗಿಸಿಕೊಳ್ಳಲಾಗಿತ್ತು. ಭೂಮಂಡಲದ ಪರಿಧಿಗಿಂತ 50 ಕಿ.ಮೀ ಎತ್ತರದಲ್ಲಿ ಕಂಡು ಬರುವ ಗುರಿಗಳನ್ನು ಛೇದಿಸುವ ಸಾಮರ್ಥ್ಯ ಈ ಕ್ಷಿಪಣಿಗಳಿಗಿದೆ. ತೂರಿ ಬರುವ ಕ್ಷಿಪಣಿಗಳನ್ನು ರಾಡಾರ್‌ಗಳು ಪತ್ತೆಹಚ್ಚಿದ ಬಳಿಕ ಕಳುಹಿಸಿದ ಮಾಹಿತಿಯ ಆಧಾರದಲ್ಲಿ ಇದು ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸುತ್ತದೆ. ಕಂಪ್ಯೂಟರ್‌ನಿಂದ ಸೂಚನೆ ಬಂದೊಡನೆ ಈ ಛೇದಕ ಕ್ಷಿಪಣಿ ಮೇಲಕ್ಕೆ ನೆಗೆದು ಗುರಿಯತ್ತ ಧಾವಿಸುತ್ತದೆ. ಇಂಟೀರಿಯಲ್ ನೇವಿಗೇಷನ್ ಸಿಸ್ಟಮ್(ಐಎನ್‌ಎಸ್)ನ ಮಾರ್ಗದರ್ಶನದ ಸಹಾಯದಿಂದ ಕಾರ್ಯ ನಿರ್ವಹಿಸಲಾಗುತ್ತದೆ.





