ನಿವೇಶನ ಹಂಚಿಕೆ ವಿವಾದ: ದಿಡ್ಡಳ್ಳಿಯಲ್ಲಿ ನಿಷೇಧಾಜ್ಞೆ ಜಾರಿ
ನಿರಾಶ್ರಿತರಿಂದ ಎರಡನೇ ಹಂತದ ಹೋರಾಟದ ಎಚ್ಚರಿಕೆ

ಮಡಿಕೇರಿ, ಫೆ.11: ದಿಡ್ಡಳ್ಳಿಯಲ್ಲಿ ಆಶ್ರಯ ಪಡೆದಿರುವ ಗಿರಿಜನ ಕುಟುಂಬಗಳು ಈ ಹಿಂದೆ ಇದ್ದ ಪ್ರದೇಶದಲ್ಲೆ ನಿವೇಶನ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿ ಭೂಮಿ ಮತ್ತು ವಸತಿ ವಂಚಿತರ ಹಕ್ಕು ಹೋರಾಟ ಸಮಿತಿಯ ಮೂಲಕ ಫೆ.13ರಂದು ಎರಡನೆ ಹಂತದ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿವೆ.
ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಿಡ್ಡಳ್ಳಿ, ಚೆನ್ನಂಗಿ ಮತ್ತು ಮಾಲ್ದಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆಯನ್ನು ಜಾರಿ ಮಾಡಿದೆ.
ಫೆ.12 ರ ಬೆಳಗ್ಗೆ 6 ಗಂಟೆಯಿಂದ ಫೆೆ.15 ರ ಸಂಜೆ 6 ಗಂಟೆಯವರೆಗೆ 144ನೆ ಸೆಕ್ಷನ್‌ನಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ನಿಷೇಧಾಜ್ಞೆ ಇರುವ ಪ್ರದೇಶಕ್ಕೆ ವಾಸ್ತವ್ಯ ಹೂಡಿರುವ ಬುಡಕಟ್ಟು ಜನಾಂಗ ಹೊರತುಪಡಿಸಿದಂತೆ ಇತರ ವ್ಯಕ್ತಿಗಳಿಗೆ ಪ್ರವೇಶಾವಕಾಶ ನಿರಾಕರಿಸಲಾಗಿದೆ.
ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮಾತ್ರ ಪ್ರವೇಶಿಸಬಹುದಾಗಿದೆ. ಕಳೆೆದ ಕೆಲವು ತಿಂಗಳುಗಳ ಹಿಂದೆ ನಿರಾಶ್ರಿತರೆಂದು ಹೇಳಿಕೊಂಡು ಮೀಸಲು ಅರಣ್ಯ ಪ್ರದೇಶದಲ್ಲಿ ಹೋರಾಟಗಾರರಾದ ಜೆ.ಕೆ.ಮುತ್ತಮ್ಮ ಹಾಗೂ ಜೆ.ಕೆ. ಅಪ್ಪಾಜಿ ಅವರ ನೇತೃತ್ವದಲ್ಲಿ ಕೆಲವು ಗುಡಿಸಲುಗಳು ತಲೆ ಎತ್ತಿದ್ದವು. ದಿನಕಳೆದಂತೆ ಇವುಗಳ ಸಂಖ್ಯೆ ಹೆಚ್ಚಾದ ಕಾರಣ ಅಕ್ರಮ ಗುಡಿಸಲುಗಳನ್ನು ಅನಿವಾರ್ಯವಾಗಿ ತೆರವುಗೊಳಿಸಬೇಕಾಯಿತು.
ತೆರವು ಕಾರ್ಯಾಚರಣೆಗೆ ತಡೆಯೊಡ್ಡಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಯಿತಾದರು ಆಶ್ರಮ ಶಾಲೆಯ ವ್ಯಾಪ್ತಿಯಲ್ಲಿ ಪ್ರತಿಭಟನೆಯನ್ನು ಮುಂದುವರಿಸಲಾಯಿತು. ಪ್ರತಿಭಟನೆಗೆ ಸರಕಾರ ಸ್ಪಂದಿಸಿ ಸೂಕ್ತ ಪರಿಹಾರವನ್ನು ಸೂಚಿಸಿದರೂ ಕೆಲವರು ಪ್ರತಿಭಟನಾ ನಿರತರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗುಡ್ಡೆಹೊಸೂರು, ಬಸವನಹಳ್ಳಿಯಲ್ಲಿ 181 ಕುಟುಂಬಗಳು, ವೀರಾಜಪೇಟೆ ತಾಲೂಕಿನ ಕೆದಮುಳ್ಳೂರಿನಲ್ಲಿ 176 ಕುಟುಂಬ ಹಾಗೂ ಹೆಬ್ಬಾಲೆ ಗ್ರಾಮ ಪಂಚಾಯತ್‌ನ ಕಣಿವೆ ಬಳಿಯ ರಾಂಪುರ ಎಂಬಲ್ಲಿ 171 ಕುಟುಂಬಗಳಿಗೆ ನಿವೇಶನ ಗುರುತಿಸಿ ಹಂಚುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು.
ಆದರೆ, ಕೆಲವು ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗಿ ದಿಡ್ಡಳ್ಳಿಯಲ್ಲೆ ನಿವೇಶನ ಬೇಕೆಂದು ಒತ್ತಾಯಿಸಿರುವ ಕೆಲವರು ಫೆ.13ರಂದು ಪ್ರತಿಭಟನೆಯನ್ನು ತೀವ್ರಗೊಳಿಸಲು ಮುಂದಾಗಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಫೆ.13 ರಂದು ಸಂಕಲ್ಪಸಭೆ
ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿಯ ಹೋರಾಟಗಾರರಾದ ಎ.ಕೆ.ಸುಬ್ಬಯ್ಯ, ನಿರ್ವಾಣಪ್ಪ, ಸಿರಿಮನೆ ನಾಗರಾಜು, ನೂರ್ ಶ್ರೀಧರ್ ಸೇರಿದಂತೆ ಇತರ ಹೋರಾಟಗಾರರೊಂದಿಗೆ ಫೆ.13 ರಂದು ದಿಡ್ಡಳ್ಳಿಯಲ್ಲಿ ಸಂಕಲ್ಪ ಸಭೆೆಯನ್ನು ಆಯೋಜನೆಗೊಂಡಿದೆ.
ಈ ಸಭೆಗೆ ಹಿರಿಯ ಸ್ವಾತಂತ್ಯ ಹೋರಾಟಗಾರ ಎ. ದೊರೆಸ್ವಾಮಿ ಅವರು ಆಗಮಿಸುವ ನಿರೀಕ್ಷೆ ಇದೆ. ಸಭೆಯಾದ ನಂತರ ಫೆೆ. 14 ರಂದು ಮಡಿಕೇರಿಯಲ್ಲಿ ಮತ್ತೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳ ಕಚೆೇರಿ ಎದುರು ಅಹೋ ರಾತ್ರಿ ಧರಣಿ ಸತ್ಯಾಗ್ರಹ ನಡೆಸುವ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಲಭಿಸಿದೆ.
ಈ ಸಂದರ್ಭ 1 ಸಾವಿರದಿಂದ 1,200 ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಸತಿ ರಹಿತ ಬುಡಕಟ್ಟು ಜನಾಂಗ ಹೊರತು ಪಡಿಸಿ ಇತರೆ ಯಾವುದೇ ವ್ಯಕ್ತಿಗಳು ದಿಡ್ಡಳ್ಳ್ಳಿ ವ್ಯಾಪ್ತಿಯಲ್ಲಿ ಬಾರದಂತೆ ಜಿಲ್ಲಾಡಳಿತ ಆದೇಶಿಸಿದೆ.







