ಟ್ರಂಪ್ ತನ್ನ ಹುದ್ದೆಯ ಬಗ್ಗೆ ಕಲಿಯುತ್ತಿದ್ದಾರೆ :ಚೀನಾ ಮಾಧ್ಯಮ

ಬೀಜಿಂಗ್, ಫೆ. 11: ‘ಅವಿಭಜಿತ ಚೀನಾ’ ನೀತಿಯ ಕುರಿತ ತನ್ನ ರೋಷಾವೇಶದ ಮಾತುಗಳಿಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂದೆ ಸರಿದಿರುವುದು, ಅವರು ತನ್ನ ನೂತನ ಹುದ್ದೆಯ ಬಗ್ಗೆ ಕಲಿಯುತ್ತಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ ಎಂದು ಚೀನಾದ ಅಧಿಕೃತ ಮಾಧ್ಯಮ ಶನಿವಾರ ಹೇಳಿದೆ.
ತೈವಾನ್ ಚೀನಾದ ಪ್ರಧಾನ ನೇಲಕ್ಕೆ ಸೇರಿದೆ ಎಂಬುದನ್ನು ಮಾನ್ಯ ಮಾಡುವ ಮೂಲಕ, ಅಮೆರಿಕ ದಶಕಗಳಿಂದ ಅನುಸರಿಸಿಕೊಂಡು ಬರುತ್ತಿರುವ ‘ಅವಿಭಜಿತ ಚೀನಾ’ ನೀತಿಯನ್ನು ಮಾನ್ಯ ಮಾಡಲು ಟ್ರಂಪ್ ಒಪ್ಪಿರುವುದನ್ನು ‘ಗ್ಲೋಬಲ್ ಟೈಮ್ಸ್’ ಶ್ಲಾಘಿಸಿದೆ.
‘‘ಅಧಿಕಾರ ವಹಿಸಿಕೊಂಡ ಬಳಿಕ, ಟ್ರಂಪ್ ಮತ್ತು ಅವರ ತಂಡ ಚೀನಾದ ಕುರಿತ ತಮ್ಮ ನಿಲುವನ್ನು ಬದಲಿಸಿದ್ದಾರೆ. ಚೀನಾದ ಮೂಲಭೂತ ಹಿತಾಸಕ್ತಿಗಳಿಗೆ ಬಹಿರಂಗವಾಗಿ ಸವಾಲು ಹಾಕುವುದನ್ನು ಟ್ರಂಪ್ ನಿಲ್ಲಿಸಿದ್ದಾರೆ. ಬದಲಿಗೆ, ಬೀಜಿಂಗ್‌ಗೆ ಗೌರವ ತೋರಿಸಿದ್ದಾರೆ’’ ಎಂದು ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಹೇಳಿದೆ.
‘ಅವಿಭಜಿತ ಚೀನಾ’ ನೀತಿಗೆ ಬದ್ಧನಾಗಿರಬೇಕೆಂದು ತನಗೆ ಅನಿಸುತ್ತಿಲ್ಲ ಎಂದು ಅಧಿಕಾರ ವಹಿಸಿಕೊಳ್ಳುವ ಮೊದಲು ಟ್ರಂಪ್ ಹೇಳಿದ್ದರು ಹಾಗೂ ತೈವಾನ್ ಅಧ್ಯಕ್ಷೆಯ ಜೊತೆ ಪೋನ್‌ನಲ್ಲಿ ಮಾತನಾಡುವ ಮೂಲಕ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದರು.
ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆಗೆ ಇತ್ತೀಚೆಗೆ ನಡೆಸಿದ ಮೊದಲ ಟೆಲಿಫೋನ್ ಸಂಭಾಷಣೆಯಲ್ಲಿ, ‘ಅವಿಭಜಿತ ಚೀನಾ’ ನೀತಿಯನ್ನು ಪಾಲಿಸುವುದಾಗಿ ಟ್ರಂಪ್ ಭರವಸೆ ನೀಡಿರುವುದನ್ನು ಸ್ಮರಿಸಬಹುದಾಗಿದೆ.
ಸಿಡಿದು ಹೋದ ಪ್ರಾಂತ
ತೈವಾನ್ ತನ್ನಿಂದ ಸಿಡಿದು ಹೋದ ಪ್ರಾಂತ ಎಂಬುದಾಗಿ ಚೀನಾ ಪರಿಗಣಿಸುತ್ತದೆ. ಅಗತ್ಯ ಬಿದ್ದರೆ ಬಲ ಪ್ರಯೋಗಿಸಿಯಾದರೂ ಅದನ್ನು ಮತ್ತೆ ತನ್ನ ತೆಕ್ಕೆಗೆ ಸೇರಿಸಿಕೊಳ್ಳಬೇಕಾಗುತ್ತದೆ ಎಂದು ಭಾವಿಸುತ್ತದೆ.
ಸ್ವ-ಆಡಳಿತವಿರುವ ತೈವಾನ್ ದ್ವೀಪದ ನಾಯಕರೊಂದಿಗೆ ವಿದೇಶಿ ಸರಕಾರಗಳು ಅಧಿಕೃತ ಸಂಪರ್ಕ ಹೊಂದುವುದನ್ನು ಚೀನಾ ವಿರೋಧಿಸುತ್ತದೆ.







