ಹೀಗೊಬ್ಬ ಪಾರಿವಾಳ ಪ್ರೇಮಿ!

ಫಾಕ್ಸನ್ ಸೋಲೋಸ್, ಫಾಕ್ಸನ್ ವೆರಿಸ್, ಫಾಕ್ಸನ್ ಪ್ರೀಸ್ಟ್, ಮೋಂಗ್ ಸ್ಪೋರ್ಟ್, ಮೋರ್ ಹೆಡ್, ಸಿರಾಸ್, ಮುಷ್ಕಿ, ಕಾಪ್ಪಿಚ್ಚಿನೋ, ಉಸ್ಬಕ್, ಫಾನ್ ರಯಿಲ್ಸ್, ಕೋಮಾರ್ನರ್ ಸೇರಿದಂತೆ ಹಲವು ವಿಧದ ಪಾರಿವಾಳಗಳು ಒಂದೇ ಸ್ಥಳದಲ್ಲಿ ಕಾಣಸಿಗುತ್ತಿವೆ.
ಶಾಂತಿಯ ಸಂಕೇತವಾಗಿರುವ ಪಾರಿವಾಳಗಳ ವೈವಿಧ್ಯಮಯ ಪ್ರಬೇಧಗಳನ್ನು ಒಂದೆಡೆ ನೋಡಬೇಕಾದರೆ ಮಧೂರು ಸಮೀಪದ ಪಟ್ಲ ಎಂಬಲ್ಲಿಗೆ ಬರಬೇಕು. ಇಲ್ಲಿ ಒಂದೆರಡಲ್ಲ ಸುಮಾರು 50 ಪ್ರಬೇಧಗಳ ಸುಮಾರು 600ರಷ್ಟು ಪಾರಿವಾಳಗಳನ್ನು ಕಾಣಬಹುದು.
ಪಟ್ಲದ ಮುಹಮ್ಮದ್ ಹಾರಿಸ್ ಎಂಬವರೇ ಈ ಪಾರಿವಾಳ ಪ್ರೇಮಿ.
ಚಿಕ್ಕಂದಿನಿಂದಲೇ ಪಾರಿವಾಳಗಳ ಮೇಲಿನ ಆಸಕ್ತಿ, ಪ್ರೀತಿ ಬೆಳೆದು ಈಗ 600ಕ್ಕೂ ಅಧಿಕ ಪಾರಿವಾಳಗಳು ಇವರ ಬಳಿ ಇವೆ. 13ನೆ ವಯಸ್ಸಿನಲ್ಲಿ ದಾರಿ ಮಧ್ಯೆ ಸಿಕ್ಕಿದ ಪಾರಿವಾಳ ಅವರ ಪಾರಿವಾಳ ಪ್ರೀತಿಗೆ ನಾಂದಿಯಾಯಿತು.
ಸ್ವದೇಶಿ, ವಿದೇಶಿ ತಳಿಗಳು ಸೇರಿದಂತೆ 600ಕ್ಕಿಂತ ಅಧಿಕ ಪಾರಿವಾಳಗಳು ಹಾರಿಸ್ ಮನೆಯಲ್ಲಿವೆ. ಜಗತ್ತಿನ ಹಲವಡೆ ಕಾಣಸಿಗುವ ಪಾರಿವಾಳಗಳು ಇವರ ಮನೆಯಂಗಳದಲ್ಲಿವೆ.

ಈ ಪರಿಸರಕ್ಕೆ ತಲಪಿದಾಗ ಕೇಳಿಬರುತ್ತಿರುವುದು ಗುಟು ಗುಟು ಸದ್ದು, ಮನೆಗೆ ಪ್ರವೇಶಿಸುತ್ತಲೇ ಕಾಣಸಿಗುವುದು ಬಹು ರೂಪದ ಪಾರಿವಾಳಗಳು. ನೂರಕ್ಕೂ ಅಧಿಕ ಗೂಡುಗಳಲ್ಲಿ ಪಾರಿವಾಳಗಳು ಕಣ್ಣಿಗೆ ರಸದೌತಣ ನೀಡುತ್ತಿವೆ.
ಚಿಕ್ಕಂದಿನಿಂದಲೇ ಹಾರಿಸ್‌ಗೆ ಪಾರಿವಾಳದ ಮೇಲೆ ಎಲ್ಲಿಲ್ಲದ ಪ್ರೀತಿ. 13ನೆ ವಯಸ್ಸಿನಲ್ಲಿಯೇ ಊರಲ್ಲಿ ಸಿಗುವ ಪಾರಿವಾಳವನ್ನು ಹಿಡಿದು ಸಾಕುವ ಹವ್ಯಾಸ ಬೆಳೆದುಕೊಂಡಿದ್ದರು. ಈಗ 46 ವರ್ಷ. ಈಗ ಇವರ ಬಳಿ ಇರುವುದು 600ಕ್ಕೂ ಅಧಿಕ ಪಾರಿವಾಳಗಳು.
ಬಿಳಿ, ಕಪ್ಪು, ಕಂದು, ಬೂದಿ ಹಾಗೂ ವಿವಿಧ ಮಿಶ್ರ ಬಣ್ಣದ ಪಾರಿವಾಳಗಳು ಇವರ ಬಳಿ ಇವೆ. ಫಾಕ್ಸನ್ ಸೋಲೋಸ್, ಫಾಕ್ಸನ್ ವೆರಿಸ್, ಫಾಕ್ಸನ್ ಪ್ರೀಸ್ಟ್, ಮೋಂಗ್ ಸ್ಪೋರ್ಟ್, ಮೋರ್ ಹೆಡ್, ಸಿರಾಸ್, ಮುಷ್ಕಿ, ಕಾಪ್ಪಿಚ್ಚಿನೋ, ಉಸ್ಬಕ್, ಫಾನ್ ರಯಿಲ್ಸ್, ಕೋಮಾರ್ನರ್ ಸೇರಿದಂತೆ ಹಲವು ವಿಧದ ಪಾರಿವಾಳಗಳು ಒಂದೇ ಸ್ಥಳದಲ್ಲಿ ಕಾಣಸಿಗುತ್ತಿವೆ.
ಸಣ್ಣ ಗಾತ್ರದ ಪಾರಿವಾಳ, ಪುಟ್ಟ ತಲೆಯ ದುಂಡು ದೇಹದ ಪಾರಿವಾಳ, ಮೈತುಂಬಾ ನಿಮಿರಿ ನಿಂತ ಗರಿಗಳನ್ನು ಹೊಂದಿರುವ ಪಾರಿವಾಳ ಹಾಗೂ ಬಣ್ಣಗಳಿಂದ ಕೂಡಿದ ಪಾರಿವಾಳಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಕಳೆದ ಮೂರು ದಶಕಗಳಿಂದ ಇವರು ಕರ್ನಾಟಕವಲ್ಲದೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಇನ್ನಿತರ ರಾಜ್ಯಗಳಿಂದಲೂ ಪಾರಿವಾಳಗಳನ್ನು ಖರೀದಿಸಿದ್ದಾರೆ.
ಇದಲ್ಲದೆ ಬಾಂಗ್ಲಾ ದೇಶ ಹಾಗೂ ಇತರ ದೇಶಗಳಿಂದ ತಂದಿರುವ ಪಾರಿವಾಳಗಳನ್ನೂ ಖರೀದಿಸಿದ್ದಾರೆ. ವಿವಿಧ ಪ್ರಬೇಧದ ನೂರಾರು ಪಾರಿವಾಳಗಳು ಒಂದೆಡೆ ಇದ್ದರೆ ಸುತ್ತಮುತ್ತಲಿರುವ ಊರ ಪಾರಿವಾಳಗಳು ಇವುಗಳ ಜೊತೆ ಸೇರಿಕೊಳ್ಳುತ್ತಿದ್ದು ನೋಡುಗರನ್ನು ಆಕರ್ಷಿಸುತ್ತಿದೆ.
ಹಳೆ ಮನೆಯ ಅಂಗಳ ಮತ್ತು ಮನೆ ಪರಿಸರ ಪಾರಿವಾಳಗಳಿಗಾಗಿಯೇ ಮೀಸಲಿಡಲಾಗಿದೆ. ಫ್ಯಾಶನ್ ಪಾರಿವಾಳಗಳು ಹೆಚ್ಚು ಆಕರ್ಷಣೆಯಾಗಿದೆ.

ಫ್ಯಾಶನ್ ಪಾರಿವಾಳ ಇಡುವ ಮೊಟ್ಟೆಗಳನ್ನು ಸಾಮಾನ್ಯ ಪಾರಿವಾಳಗಳಿಂದ ಮರಿ ಮಾಡಿಸುತ್ತಾರೆ. ಫ್ಯಾಶನ್ ಪಾರಿವಾಳಗಳು ಮರಿಗಳನ್ನು ಸಾಕಲು ಹೆಚ್ಚು ಗಮನ ನೀಡುವುದಿಲ್ಲ. ಇದರಿಂದ ಫ್ಯಾಶನ್ ಮರಿಗಳು ಮೊಟ್ಟೆ ಇಡುವ ಸಂದರ್ಭದಲ್ಲೇ ಮೊಟ್ಟೆ ಇಡುವ ಸಾಮಾನ್ಯ ಪಾರಿವಾಳಗಳ ಮೊಟ್ಟೆಗಳೊಂದಿಗೆ ಇರಿಸಿ ಮರಿಗಳನ್ನು ಪಡೆಯುತ್ತಾರೆ. 18 ದಿನಗಳಲ್ಲಿ ಮರಿಗಳಾಗುತ್ತಿವೆ.

ಪಾರಿವಾಳಗಳಿಗೆ ಆಹಾರವಾಗಿ ಬಿಳಿ ಜೋಳ, ಮೆಕ್ಕೆ ಜೋಳ, ಬಟಾಣಿ, ಕಡಲೆ ತುಂಡುಗಳು, ಕೋಳಿ, ಮೀನಿನ ತುಂಡುಗಳನ್ನು ನೀಡಲಾಗುತ್ತಿದೆ.
ಮರಿಗಳನ್ನು ಅಗತ್ಯ ಬಿದ್ದವರಿಗೆ ಮಾರಾಟ ಮಾಡುತ್ತಿದ್ದು , ಸಾಕಷ್ಟು ಬೇಡಿಕೆ ಇದೆ ಎನ್ನುತ್ತಾರೆ ಮುಹಮ್ಮದ್ ಹಾರಿಸ್.
500ರಿಂದ 1000 ರೂ. ತನಕ ಬೆಲೆ ಹೊಂದಿರುವ ರಂಗು ರಂಗಿನ ಪಾರಿವಾಳಗಳು ಇವರ ಬಳಿ ಇದೆ.
ಪ್ರಾವು ಪ್ರಾಂತನ್, ಕೇರಳ ಪಿಜನ್ ಸೊಸೈಟಿ, ಯುನೈಟೆಡ್ ಪಿಜನ್ ಕ್ಲಬ್ ಸೇರಿದಂತೆ 35ರಷ್ಟು ಪಾರಿವಾಳ ಪ್ರಿಯರ ವಾಟ್ಸ್ ಆ್ಯಪ್ ಗ್ರೂಫ್‌ಗಳಲ್ಲಿ ಹಾರಿಸ್ ಸದಸ್ಯರಾಗಿದ್ದಾರೆ. ಈ ವಾಟ್ಸ್ ಆ್ಯಪ್ ಗ್ರೂಫ್‌ಗಳಲ್ಲಿ ಭಾವಚಿತ್ರ ಮತ್ತು ಮಾಹಿತಿ ನೀಡಿ ಪಾರಿವಾಳದ ಮಾರಾಟ ನಡೆಯುತ್ತಿದೆ.

ಕೆಲ ವರ್ಷಗಳ ಹಿಂದೆ ಬೆಲ್ಜಿಯಂ ವೆಬ್ ಸೈಟ್ ಗಳಲ್ಲಿ ಒಂದಾದ ‘ಪಿಜನ್ ಪಾರಡೈಸ್’ ನಡೆಸಿದ ಏಲಂ ಹಲವಡೆ ಸಾಮಾಜಿಕ ಜಾಲ ತಾಣಗಳ ಮೂಲಕ ಪಾರಿವಾಳಗಳನ್ನು ಮಾರಾಟ ಮಾಡಲು ಬಾಗಿಲು ತೆರೆದಿಟ್ಟಿತು. ಹೀಗೆ ಮುಗ್ಧ ಪಕ್ಷಿಯಾಗಿರುವ ಪಾರಿವಾಳ ಪ್ರಪಂಚವೇ ಮುಹಮ್ಮದ್ ಹಾರಿಸ್‌ರವರ ಮನೆ ಪರಿಸರದಲ್ಲಿದೆ. ತಮ್ಮ ಜೀವನದ ಅವಿಭಾಜ್ಯ ಅಂಗದೊಂದಿಗೆ ಎಲ್ಲರನ್ನೂ ಕೌತುಕಗೊಳಿಸುತ್ತಿದೆ.







