ಚಾರು ಶರ್ಮ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸದಂತೆ ಬಾಂಬೆ ಹೈಕೋರ್ಟ್ ನಿರ್ದೇಶನ
ಕಬಡ್ಡಿ ಲೀಗ್ ವಂಚನೆ ಪ್ರಕರಣ

ಮುಂಬೈ, ಫೆ.11: ಪ್ರೋ ಕಬಡ್ಡಿ ಲೀಗ್‌ನಲ್ಲಿ ನಡೆದಿದೆ ಎನ್ನಲಾದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಕ್ರೀಡಾ ವೀಕ್ಷಕವಿವರಣೆಗಾರ ಚಾರು ಶರ್ಮ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸದಂತೆ ಬಾಂಬೆ ಹೈಕೋರ್ಟ್ ನಗರ ಪೊಲೀಸರಿಗೆ ನಿರ್ದೇಶನ ನೀಡಿದೆ.
ಜಸ್ಟಿಸ್ ಎ.ಎಸ್. ಒಕಾ ಹಾಗೂ ಅನುಜಾ ಪ್ರಭುದೇಸಾಯಿ ಅವರಿದ್ದ ವಿಭಾಗೀಯ ನ್ಯಾಯಪೀಠ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ತಡೆ ಹೇರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
‘‘ತನಿಖೆ ಮುಂದುವರಿಸಲು ಪೊಲೀಸರು ಮುಕ್ತರಾಗಿದ್ದಾರೆ. ಅರ್ಜಿದಾರರು(ಶರ್ಮ) ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು. ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲ ಮೂಲ ದಾಖಲೆಗಳನ್ನು ತಕ್ಷಣವೇ ಪೊಲೀಸರಿಗೆ ಸಲ್ಲಿಸಬೇಕು’’ ಎಂದು ಜಸ್ಟಿಸ್ ಓಕಾ ಆದೇಶಿಸಿದರು.
ಚಾರು ಶರ್ಮ ಹಾಗೂ ಇತರರು ಪ್ರೊ ಕಬಡ್ಡಿ ಲೀಗ್ ನಡೆಸುವ ತನ್ನ ಯೋಜನೆಯನ್ನು ‘ಹೈಜಾಕ್’ ಮಾಡಿದ್ದಾರೆ ಎಂದು ಆರೋಪಿಸಿ 2015ರಲ್ಲಿ ಮಾಜಿ ಕಬಡ್ಡಿ ಆಟಗಾರ ಅಭಿಷೇಕ್ ಎಂಬುವವರು ಬೊಯಿವಾಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನ್ನ ವಿರುದ್ಧ ದಾಖಲಾದ ಎಫ್‌ಐಆರ್‌ನ್ನು ರದ್ದುಪಡಿಸುವಂತೆ ಕೋರಿ ಚಾರು ಶರ್ಮ ಹೈಕೋರ್ಟ್ ಮೊರೆ ಹೋಗಿದ್ದರು.
ಚಾರು ಶರ್ಮ ಅವರು ಉದ್ಯಮಿ ಆನಂದ್ ಮಹೇಂದ್ರ ಪಾಲುದಾರಿಕೆಯಲ್ಲಿ 2014ರಲ್ಲಿ ಪ್ರೊ ಕಬಡ್ಡಿ ಲೀಗ್‌ನ್ನು ಆರಂಭಿಸಿದ್ದರು.
ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಶರ್ಮಗೆ ಮಧ್ಯಂತರ ಪರಿಹಾರ ನೀಡಿರುವ ನ್ಯಾಯಾಲಯ, ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಬಹುದು. ಆದರೆ, ಶರ್ಮ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸುವಂತಿಲ್ಲ ಎಂದು ತಾಕೀತು ಮಾಡಿದೆ.







