ಮೂಡುಬಿದಿರೆ : 'ಕಂಬಳ - ನಮ್ಮ ಹೆಮ್ಮೆ' ಲಾಂಛನ ಬಿಡುಗಡೆ
ಅಹಿಂಸೆಯಿಂದ ಕಂಬಳ ಉಳಿಸೋಣ : ಅಭಯಚಂದ್ರ ಜೈನ್

ಮೂಡುಬಿದಿರೆ,ಫೆ.11 : ತುಳುನಾಡಿನ ಸಂಸ್ಕೃತಿ ಕಂಬಳವನ್ನು ಅಹಿಂಸೆಯ ಮಾರ್ಗದಿಂದ ಉಳಿಸಿಕೊಳ್ಳೋಣ. ತಮಿಳರು ತಮ್ಮ ಜಲ್ಲಿಕಟ್ಟನ್ನು ಉಳಿಸಿದ ಮಾರ್ಗವನ್ನು ನಾವು ಅನುಸರಿಸುವುದು ಬೇಡ. ಅಹಿಂಸೆಯಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡ ನಾವು ಕಂಬಳವನ್ನೂ ಅದೇ ಮಾರ್ಗದಲ್ಲಿ ವಾಪಾಸು ತರಬೇಕಾಗಿದೆ ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು.
ಅವರು ವಿಜಯಕರ್ನಾಟಕ ಪತ್ರಿಕೆಯ ಕಂಬಳ-ಬೆಂಬಲ ಅಭಿಯಾನದಂಗವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶನಿವಾರದಂದು "ಕಂಬಳ ನಮ್ಮ ಹೆಮ್ಮೆ" ಲಾಂಛನ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಂಬಳ ಕೃಷಿ ಸಂಬಂಧಿತ ಜಾನಪದ ಕ್ರೀಡೆ. ಇದು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಪೇಟಾದವರು ಇದನ್ನು ಹಿಂಸೆಯೆಂದು ತಿಳಿದಿದ್ದಾರೆ. ತುಳುನಾಡಿನ ಕ್ರೀಡಾಪ್ರೇಮಿಗಳು ಕಂಬಳವನ್ನು ಉಳಿಸಬೇಕೆನ್ನುವ ನಿಟ್ಟಿನಲ್ಲಿ ದೊಡ್ಡ ಹೋರಾಟವನ್ನೇ ಮಾಡಿದ್ದಾರೆ. ಈಗಾಗಲೇ ರಾಜ್ಯ ಸರಕಾರವು ಮಸೂದೆಯನ್ನು ಮಂಡಿಸಿದ್ದು, ಕಂಬಳಕ್ಕೆ ಅನುಮತಿ ಸಿಗುತ್ತದೆ ಎಂಬ ಭರವಸೆ ಇದೆ. ಕಂಬಳದ ಕೋಣಗಳನ್ನು ಕೃಷಿ ಚಟುವಟಿಕೆಗಳಿಗೂ ಉಪಯೋಗಿಸುವ ಬಗ್ಗೆ ಕೃಷಿಕರು ಚಿಂತನೆ ನಡೆಸಬೇಕಿದೆ ಎಂದು ಅವರು ಹೇಳಿದರು.
ಆಧುನಿಕ ಕಂಬಳದ ರೂವಾರಿ ಮಿಜಾರು ಗುತ್ತು ಆನಂದ ಆಳ್ವ ಲಾಂಛನವನ್ನು ಬಿಡುಗಡೆಗೊಳಿಸಿದರು. ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಮಾತನಾಡಿ ಕಂಬಳಕ್ಕೂ ಕೃಷಿಗೂ ನಿಕಟ ಭಾಂದವ್ಯವಿದೆ. ಕಂಬಳ ಇಲ್ಲವಾದರೆಜಾನಪದ ಕಲೆಗಳುಅಸ್ತಿತ್ವಕ್ಕೇ ಅಪಾಯವಿದೆ.ಹಿಂಸೆಗೆ ಪ್ರಚೋದಿಸುವ ಕ್ರೀಡೆಗಳಿಗೆ ವ್ಯಾಪಕ ಪೋಷಣೆ ಸಿಗುತ್ತಿರುವ ಈ ಕಾಲದಲ್ಲಿ ಕಂಬಳಕ್ಕೆ ಮಾನ್ಯತೆ ಸಿಗದಿರುವುದು ಬೇಸರದ ಸಂಗತಿ ಎಂದು ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ ಕಂಬಳ ಕ್ರೋಧವಾದರೆ ಗೋಹತ್ಯೆ ಅದಕ್ಕಿಂತಲೂ ಘೋರವಾದುದು. ಮೊದಲಿಗೆ ಅದನ್ನು ನಿಲ್ಲಿಸಬೇಕಿದೆ. ಕಂಬಳವೆಂದರೆ ಇದೊಂದು ಜೀವನ ಪದ್ಧತಿ. ನಮ್ಮ ಸಂಸ್ಕೃತಿ ಪರಂಪರೆಯೇ ಕೃಷಿಯೊಂದಿಗೆ ಬೆರೆತಿದೆ. ಕಂಬಳದ ಹೆಸರಲ್ಲಿ ನಮ್ಮ ಪರಂಪರಾಗತ ಕೃಷಿ ವಿಧಾನದ ಪುನಶ್ಚೇತನವಾಗಬೇಕಿದೆ ಎಂದರು.
ತುಳು ಚಿತ್ರರಂಗದ ನಟರಾದನವೀನ್ ಡಿ.ಪಡೀಲ್, ಬೋಜರಾಜ್ ವಾಮಂಜೂರು ಮಾತನಾಡಿದರು.
ಕಂಬಳ ಸಮಿತಿಯ ಜಿಲ್ಲಾ ಪ್ರ.ಕಾರ್ಯದರ್ಶಿ ಗುಣಪಾಲ ಕಡಂಬ, ಕಂಬಳ ಸಮಿತಿಯ ಜಿಲ್ಲಾ ಅಧ್ಯಕ್ಷ ಬಾರ್ಕೂರು ಶಾಂತರಾಮ ಶೆಟ್ಟಿ, ಅಂತರಾಷ್ಟ್ರೀಯ ಕ್ರೀಡಾ ತರಬೇತುದಾರ ದಿನೇಶ್ ಕುಂದರ್, ಅದಾನಿ ಗ್ರೂಪ್‌ನ ಕಿಶೋರ್ ಆಳ್ವ, ಮೂಡಾ ಅಧ್ಯಕ್ಷ ಸುರೇಶ್ ಪ್ರಭು, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ಕಂಬಳ ಸಮಿತಿಯ ಚಂದ್ರಹಾಸ ಸನಿಲ್, ರಘುರಾಮ ಶೆಟ್ಟಿ, ಧನಕೀರ್ತಿ ಬಲಿಪ, ನಟಿ ಶೃತಿ ಕೋಟ್ಯಾನ್, ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನೀಯ ಸಂಪಾದಕ ಕುಮಾರ್ ನಾಥ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಶೆಟ್ಟಿ ವಂದಿಸಿದರು.







