ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕ ಕ್ಲೀನ್‌ಸ್ವೀಪ್
ಏಕದಿನ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಕೈವಶ

ಸೆಂಚೂರಿಯನ್, ಫೆ.11: ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕ್ವಿಂಟನ್ ಡಿಕಾಕ್ ಹಾಗೂ ಹಾಶಿಮ್ ಅಮ್ಲ ಸಿಡಿಸಿದ ಆಕರ್ಷಕ ಶತಕದ ಬೆಂಬಲದಿಂದ ದಕ್ಷಿಣ ಆಫ್ರಿಕ ತಂಡ ಶ್ರೀಲಂಕಾ ವಿರುದ್ಧದ ಐದನೆ ಹಾಗೂ ಅಂತಿಮ ಏಕದಿನ ಪಂದ್ಯವನ್ನು 88 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 5-0 ಅಂತರದಿಂದ ಕ್ಲೀನ್‌ಸ್ವೀಪ್ ಸಾಧಿಸಿತು.
ಈ ಗೆಲುವಿನ ಮೂಲಕ ಹರಿಣ ಪಡೆ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯವನ್ನು ಹಿಂದಿಕ್ಕಿ ನಂ.1 ಸ್ಥಾನ ಕಬಳಿಸಿತು. ಇಂಗ್ಲೆಂಡ್‌ನಲ್ಲಿ ಜೂನ್‌ನಲ್ಲಿ ನಿಗದಿಯಾಗಿರುವ ಚಾಂಪಿಯನ್ಸ್ ಟ್ರೋಫಿಗೆ ಮುಂಚಿತವಾಗಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕ ತಂಡ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 384 ರನ್ ಗಳಿಸಿತು. ಶ್ರೇಷ್ಠ ಫಾರ್ಮ್ ಮುಂದುವರಿಸಿದ ಡಿಕಾಕ್ 87 ಎಸೆತಗಳಲ್ಲಿ 16 ಬೌಂಡರಿ ಸಹಿತ 109 ರನ್ ಸಿಡಿಸಿದರು. ಡಿಕಾಕ್‌ಗೆ ಉತ್ತಮ ಸಾಥ್ ನೀಡಿದ ಹಾಶಿಮ್ ಅಮ್ಲ(154 ರನ್,134 ಎಸೆತ, 15 ಬೌಂಡರಿ, 5 ಸಿಕ್ಸರ್) ಮೊದಲ ವಿಕೆಟ್‌ಗೆ 187 ರನ್ ಜೊತೆಯಾಟದಲ್ಲಿ ಭಾಗಿಯಾದರು.
ಸೆಂಚೂರಿಯನ್ ಸ್ಟೇಡಿಯಂನಲ್ಲಿ ಆಡಿರುವ ಕಳೆದ ನಾಲ್ಕು ಇನಿಂಗ್ಸ್‌ಗಳಲ್ಲಿ ನಾಲ್ಕನೆ ಶತಕ ಬಾರಿಸಿ ಗಮನ ಸೆಳೆದ ಅಮ್ಲ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಶ್ರೀಲಂಕಾ 296: ಗೆಲ್ಲಲು 385 ರನ್ ಸವಾಲು ಪಡೆದ ಶ್ರೀಲಂಕಾ ತಂಡ ಅಸೆಲಾ ಗುಣರತ್ನೆ ಬಾರಿಸಿದ ಚೊಚ್ಚಲ ಶತಕದ(ಅಜೇಯ 114) ಹೊರತಾಗಿಯೂ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಶ್ರೀಲಂಕಾ ತಂಡ ಕ್ರಿಸ್ ಮೊರಿಸ್(4-31) ಹಾಗೂ ಪಾರ್ನೆಲ್(2-51) ದಾಳಿಗೆ ತತ್ತರಿಸಿ ಒಂದು ಹಂತದಲ್ಲಿ 82 ರನ್‌ಗೆ 5 ವಿಕೆಟ್ ಕಳೆದುಕೊಂಡಿತ್ತು. 6ನೆ ವಿಕೆಟ್ ಜೊತೆಯಾಟದಲ್ಲಿ 93 ರನ್ ಸೇರಿಸಿದ ಗುಣರತ್ನೆ ಹಾಗೂ ಪಥಿರನ(56 ರನ್, 62 ಎಸೆತ, 6 ಬೌಂಡರಿ, 1 ಸಿಕ್ಸರ್) ಏಕಪಕ್ಷೀಯವಾಗಿ ಸಾಗಿದ್ದ ಏಕದಿನ ಸರಣಿಯಲ್ಲಿ ಶ್ರೀಲಂಕಾ ತಂಡ ಕೊನೆಯ ಪಂದ್ಯದಲ್ಲಿ ಒಂದಷ್ಟು ಹೋರಾಟ ಸಂಘಟಿಸಲು ನೆರವಾದರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕ: 50 ಓವರ್‌ಗಳಲ್ಲಿ 384/6
(ಹಾಶಿಮ್ ಅಮ್ಲ 154, ಡಿಕಾಕ್ 109, ಪ್ಲೆಸಿಸ್ 41, ಲಕ್ಮಲ್ 3-71, ಮದುಶಂಕ 2-70)
ಶ್ರೀಲಂಕಾ: 50 ಓವರ್‌ಗಳಲ್ಲಿ 296/8
(ಗುಣರತ್ನೆ ಅಜೇಯ 114, ಪಥಿರಣ 56, ಡಿಕ್‌ವೆಲ್ಲಾ 39, ಮೊರಿಸ್ 4-31, ಪಾರ್ನೆಲ್ 2-51)
ಪಂದ್ಯಶ್ರೇಷ್ಠ: ಹಾಶಿಮ್ ಅಮ್ಲ
ಸರಣಿಶ್ರೇಷ್ಠ: ಎಫ್‌ಡು ಪ್ಲೆಸಿಸ್.







