ಸಂಸ್ಕೃತಿಯ ರಕ್ಷಣೆಗಾಗಿ ಸಂಪತ್ತು ಮತ್ತು ಸಮಯ ಮೀಸಲಿಡುವ ಅಗತ್ಯವಿದೆ: ರಾಜ್ಯಪಾಲ ವಜೂಬಾಯಿ ವಾಲ
ಹನುಮಗಿರಿ ಧರ್ಮಶ್ರೀ ಪ್ರಶಸ್ತಿ ಪುರಸ್ಕಾರ

ಪುತ್ತೂರು,ಫೆ.11: ನಮ್ಮ ದೇಶದಲ್ಲಿ ಹಿಂದೆ ಶಿಕ್ಷಣದ ಕೊರತೆ ಇತ್ತು ಆ ಸಂದರ್ಭದಲ್ಲಿ ನಮ್ಮಲ್ಲಿ ಸಂಸ್ಕಾರ ಇತ್ತು ಆದರೆ ಕಾಲ ಬದಲಾದಂತೆ ಶಿಕ್ಷಣದಲ್ಲಿ ನಾವು ಭಾರೀ ಕ್ರಾಂತಿಯ ಜೊತೆಗೆ ಪ್ರಗತಿಯನ್ನು ಕಾಣುತ್ತಿದ್ದೇವೆ ಆದರೆ ಇದರ ಜೊತೆಗೆ ದೇಶದ ಸಂಸ್ಕಾರ ಮತ್ತು ಸಂಸ್ಕೃತಿ ಕಡಿಮೆಯಾಗುತ್ತಿದೆ. ಸಂಸ್ಕೃತಿಯ ರಕ್ಷಣೆಗಾಗಿ ಸಂಪತ್ತು ಮತ್ತು ಸಮಯವನ್ನು ಮೀಸಲಿಡುವ ಅಗತ್ಯವಿದೆ ಎಂದು ಕರ್ನಾಟಕದ ರಾಜ್ಯಪಾಲ ವಜೂಭಾಯಿ ವಾಲ ಹೇಳಿದರು.
ಅವರು ಪುತ್ತೂರು ತಾಲೂಕಿನ ಈಶ್ವರಮಂಗಲ ಶ್ರೀ ಹನುಮಗಿರಿ ಕ್ಷೇತ್ರದಲ್ಲಿ ನಡೆಯುವ ಶ್ರೀರಾಮೋತ್ಸವ ಮತ್ತು ಧರ್ಮಶ್ರೀ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತದ ಸಂಸ್ಕೃತಿಗೆ ವಿಶ್ವದಲ್ಲೇ ಮಾನ್ಯತೆ ಇದೆ ಆದರೆ ಭಾರತೀಯರಾದ ನಾವು ಅದನ್ನು ಮರೆಯುತ್ತಿದ್ದೇವೆ, ನಮ್ಮ ಸಂಸ್ಕೃತಿಯಲ್ಲಿ ರಾಮಕೃಷ್ಣರ ತತ್ವಾದರ್ಶವಿದೆ. ಯಾರು ನಮಗೆ ಆದರ್ಶರಾಗಿದ್ದಾರೋ ಅವರು ಇಂದು ನಮಗೆ ಆದರ್ಶರಂತೆ ಕಾಣುತ್ತಿಲ್ಲ, ಅವರ ತತ್ವಗಳನ್ನು ನಾವು ಪಾಲನೆ ಮಾಡುತ್ತಿಲ್ಲ ಎಂದು ಹೇಳಿದರು.
ತನ್ನ ಪ್ರಾಣವನ್ನು ಲೆಕ್ಕಿಸದೆ ದೇಶ ಕಾಯುವ ಸೈನಿಕರಿಗಾಗಿ ನಾವು ಏನು ಮಾಡಿದ್ದೇವೆ ಎಂಬುದನ್ನು ನಾವು ಯೋಚಿಸಬೇಕಾದ ಅಗತ್ಯವಿದೆ ಎಂದ ಅವರು ದೇಶದ ಬಡವರಿಗಾಗಿ ನಾವು ಏನು ಮಾಡಬೇಕು ಎಂಬುದನ್ನು ಆಲೋಚನೆ ಮಾಡಬೇಕಾದ ಕಾಲಬಂದಿದೆ . ನಮ್ಮ ಜೀವನ ಸಾರ್ಥಕವಾಗಬೇಕಾದರೆ ನಾವು ಧೈರ್ಯದಿಂದ ಬದುಕುವ ಗುಣವನ್ನು ಬೆಳೆಸಿಕೊಳ್ಳಬೇಕು ತನ್ನವರಿಗಾಗಿ ಮಾತ್ರ ಯೋಚಿಸಿದೆ ಸಮಾಜದ ಅಭಿವೃದ್ದಿಗಾಗಿ ಚಿಂತನೆ ಮಾಡುವವನೇ ನಿಜವಾದ ಮಾನವೀಯ ಗುಣವುಳ್ಳವರು . ದೇಶದ ಸಂಸ್ಕೃತಿಯಲ್ಲಿ ಧನಕ್ಕೆ ಗೌರವವಿಲ್ಲ ಕೇವಲ ಗುಣಕ್ಕೆ ಮಾತ್ರ ಮೌಲ್ಯವಿದೆ. ನಮ್ಮ ಬದುಕು ಎಂದೂ ಮೌಲ್ಯ ರಹಿತವಾಗಿರಬಾರದು. ಪ್ರತಿಯೊಬ್ಬ ಭಾರತೀಯನೂ ರೈತನಿಗೆ ಮತ್ತು ಸೈನಿಕನಿಗೆ ಗೌರವ ಕೊಡುವುದನ್ನು ಕಲಿಯಬೇಕು ಎಂದು ಹೇಳಿದರು.
ಧರ್ಮಶ್ರೀ ಪ್ರಶಸ್ತಿ ಪುರಸ್ಕಾರ:ಖ್ಯಾತ ಹಿಂದಿ ಚಲನ ಚಿತ್ರ ನಟ ನಾನಾ ಪಾಟೇಕರ್ ಅವರಿಗೆ 2017 ನೇ ಸಾಲಿನ ಧರ್ಮಶ್ರೀ ಪ್ರಶಸ್ತಿಯನ್ನು ರಾಜ್ಯಪಾಲ ವಜೂಬಾಯಿವಾಲ ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾನಾಪಾಟೇಕರ್ ದೇಶದಲ್ಲಿ ಸಂಕಷ್ಟದಲ್ಲಿರುವ ರೈತ ಮತ್ತು ಸೈನಿಕರಿಗೆ ನಾಮ್ ಫೌಂಡೇಶನ್ ವತಿಯಿಂದ ನೆರವು ನೀಡುವ ಕೆಲಸವನ್ನು ಮಾಡುತ್ತಿದ್ದೇವೆ. ಇಂಡೋ ಟಿಬೇಟಿಯನ್ ಪಡೆಗಳಿಗಾಗಿ ನಾಲ್ಕು ಶಾಲೆಗಳನ್ನು ತೆರೆಯುವ ಯೋಜನೆಯನ್ನು ರೂಪಿಸಲಾಗಿದೆ. ಇದಕ್ಕೆ 12 ಕೋಟಿ ರೂ ಅವಶ್ಯಕತೆ ಇದ್ದು ಅರುಣಾಚಲಪ್ರದೇಶ, ಮೇಘಾಲಯ , ತ್ರಿಪುರಾ ರಾಜ್ಯಗಳಲ್ಲಿ ಈ ಶಾಲೆಗಳನ್ನು ನಿರ್ಮಿಸಲಾಗುವುದು. ಕಳೆದ ವರ್ಷ ಸುಮಾರು 400 ಸೈನಿಕರು ಹುತಾತ್ಮರಾಗಿದ್ದು ಈ ಕುಟುಂಬಗಳಿಗೆ ಪೌಂಡೇಶನ್ ಮೂಲಕ ಸಹಾಯ ಹಸ್ತ ನೀಡಲಾಗುತ್ತಿದೆ. ಪೃಕೃತಿ ವಿಕೋಪದಿಂದ ಹಾಗೂ ಬೆಳೆ ನಾಶದಿಂದ ತೊಂದರೆಗೀಡಾದ 1860 ರೈತ ಕುಟುಂಬಗಳಿಗೆ ರೂ. 60 ಕೋಟಿ ಸಹಾಯಧನವನ್ನು ನಾಮ್ ಫೌಂಡೇಶನ್ ವತಿಯಿಂದ ನೀಡಲಾಗಿದೆ. ದೇಶದಲ್ಲಿರುವ ಸೈನಿಕ ಮತ್ತು ರೈತನ ಅಭ್ಯುದಯಕ್ಕಾಗಿ ದೇಶದ ಪ್ರತಿಯೊಬ್ಬ ಪ್ರಜೆಯೂ ನೆರವು ನೀಡಲು ಮುಂದಾಗಬೇಕು ಇದಕ್ಕಾಗಿ ಎಲ್ಲರೂ ಒಂದಾಗಬೇಕಿದೆ. ದೇಶ ನಿವಾಸಿಗಳ ಸಹಾಯವನ್ನು ನಾಮ್ ಪೌಂಡೇಶನ್ ಸ್ವೀಕರಿಸಲು ಸಿದ್ದವಿದೆ ನಾವು ಎಂದೂ ಸಹಾಯಕ್ಕಾಗಿ ರಾಜಕಾರಣಿಗಳ ಕೈ ಚಾಚಿಲ್ಲ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಮಾತನಾಡಿ ಗ್ರಾಮೀಣ ಪ್ರದೇಶವಾದ ಹನುಮಗಿರಿಯಲ್ಲಿ ಭಾರತದ ಪರಂಪರೆ ಬಾಗಿಲು ತೆರೆದಂತಾಗಿದೆ ಮುಂದಿನ ದಿನಗಳಲ್ಲಿ ವಿಶ್ವಪ್ರಸಿದ್ದಿ ಪಡೆಯುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಎಡನೀರು ಮಹಾ ಸಂಸ್ಥಾನದ ಶ್ರೀ ಕೇಶವಾನಂದ ಭಾರತಿ ತೀರ್ಥ ಶ್ರೀ ಪಾದಂಗಳವರು ಆಶೀರ್ವಚನ ನೀಡಿದರು.
ಸಂಸದರಾದ ಪ್ರಹ್ಲಾದ ಜೋಶಿ, ನಳಿನ್‌ಕುಮಾರ್ ಕಟೀಲ್, ಶಾಸಕಿ ಶಕುಂತಳಾ ಶೆಟ್ಟಿ, ಧರ್ಮಶ್ರೀ ಪ್ರತಿಷ್ಠಾನದ ಮಹಾಪೋಷಕರಾದ ಜಿ ಕೆ ಮಹಾಬಲೇಶ್ವರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಧರ್ಮಶ್ರೀ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಸ್ವಾಗತಿಸಿದರು. ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ್ತಮೂಡೆತ್ತಾಯ ವಂದಿಸಿದರು. ನ್ಯಾಯವಾದಿ ಮಹೇಶ್ ಕಜೆ ಕಾರ್ಯಕ್ರಮ ನಿರೂಪಿಸಿದರು.







