ಉ.ಪ್ರ.: ಮತಗಟ್ಟೆಯೊಳಗೆ ಪಿಸ್ತೂಲು ಒಯ್ದಿದ್ದ ಶಾಸಕ ಸೋಮ್ ಸೋದರನ ಸೆರೆ
ಮೀರತ್,ಫೆ.11: ಶನಿವಾರ ಇಲ್ಲಿಯ ಮತಗಟ್ಟೆಯೊಂದನ್ನು ಪಿಸ್ತೂಲಿನೊಂದಿಗೆ ಪ್ರವೇಶಿಸಿದ್ದಕ್ಕಾಗಿ ವಿವಾದಾತ್ಮಕ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರ ಸೋದರ ಗಗನ್ ಸೋಮ್‌ರನ್ನು ಪೊಲೀಸರು ಬಂಧಿಸಿದ್ದಾರೆ.
ಸರ್ಧಾನಾ ವಿಧಾನಸಭಾ ಕ್ಷೇತ್ರದ ಮತಗಟ್ಟೆಗೆ ಬೆಳಗ್ಗೆ ಆಗಮಿಸಿದ್ದ ಗಗನ್ ಸೋಮ್ ಒಳಗಡಿಯಿಡುತ್ತಿದ್ದಂತೆ ಪೊಲೀಸರು ಅವರನ್ನು ತಪಾಸಣೆಗೊಳಪಡಿಸಿದಾಗ ಅವರ ಬಳಿ ಪಿಸ್ತೂಲು ಪತ್ತೆಯಾಗಿದ್ದು, ತಕ್ಷಣ ಅವರನ್ನು ಬಂಧಿಸಲಾಯಿತು.
ಚುನಾವಣಾ ಸಂಹಿತೆಯಂತೆ ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರಗಳುಳ್ಳವರು ಅವುಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸಬೇಕಾಗುತ್ತದೆ. ವಿಶೇಷ ಪ್ರಕರಣಗಳಲ್ಲಿ ಮಾತ್ರ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಲು ಅನುಮತಿ ನೀಡಲಾಗುತ್ತದೆ. ಸರ್ಧಾನಾದ ಹಾಲಿ ಶಾಸಕರಾಗಿರುವ ಸಂಗೀತ್ ಸೋಮ್ 2013ರ ಮುಝಫರ್‌ನಗರ ಗಲಭೆಗಳ ಸಂದರ್ಭ ತನ್ನ ವಿವಾದಾತ್ಮಕ ಭಾಷಣಗಳಿಂದ ಸುದ್ದಿಯಲ್ಲಿದ್ದರು.
Next Story





