ಬಾಳ್ ಠಾಕ್ರೆಯ ಮಗನಾಗಿರುವುದು ನನ್ನನ್ನು ‘ಬಾಸ್’ ಆಗಿಸಿದೆ: ಉದ್ಧವ್
ಮುಂಬೈ,ಫೆ.11: ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆ (ಬಿಎಂಸಿ)ಗೆ ತನ್ನ ಅಬ್ಬರದ ಪ್ರಚಾರದ ನಡುವೆಯೇ ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು, ಪಕ್ಷದಲ್ಲಿ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ತನ್ನ ಹಕ್ಕನ್ನು ಪ್ರತಿಪಾದಿಸುವ ಜೊತೆಗೆ, ತನ್ನ ದಿವಂಗತ ತಂದೆ ಹಾಗೂ ಪಕ್ಷದ ಸ್ಥಾಪಕ ಬಾಳ್ ಠಾಕ್ರೆಯವರ ಪರಂಪರೆಯನ್ನು ತಾನು ಪಾಲಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
‘‘ಹೌದು. ಶಿವಸೇನೆಯ ಅಧಿನಾಯಕರಾಗಿದ್ದ ಬಾಳ್ ಠಾಕ್ರೆಯವರ ಪುತ್ರನಾಗಿ ನಾನು ಖಂಡಿತವಾಗಿಯೂ ‘ಬಾಸ್’ ಆಗಿದ್ದೇನೆ. ನಾನು ಪ್ರಬಲ ಸಂಘಟನೆಯ ಮುಖ್ಯಸ್ಥನೂ ಆಗಿರುವುದರಿಂದ ನಾನು ‘ಬಾಸ್’ ಎನ್ನುವುದನ್ನೂ ಅವರೂ(ಬಿಜೆಪಿ) ಒಪ್ಪಿಕೊಳ್ಳಬೇಕು. ಆದರೆ ಈ ಜನರು (ಬಿಜೆಪಿ ನಾಯಕರು) ಕೇವಲ ಆರೋಪಗಳನ್ನು ಹೊರಿಸುವವ ರಾಗಿದ್ದಾರೆ, ಅವರಿಗೆ ಯಾವುದೇ ಬೆಲೆಯಿಲ್ಲ ಎಂದು ತನ್ನ ಪಕ್ಷದ ಮುಖವಾಣಿ ‘ಸಾಮ್ನಾ’ಕ್ಕೆ ನೀಡಿರುವ ಸಂದರ್ಶನದ ಎರಡನೆ ಭಾಗದಲ್ಲಿ ಠಾಕ್ರೆ ಹೇಳಿದ್ದಾರೆ.
‘‘ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಸರಕಾರಗಳು ಬಿಎಂಸಿಯಲ್ಲಿ ಶಿವಸೇನೆಯನ್ನು ಬೆಂಬಲಿಸುವ ಬದಲು ಅದರ ಕಾಲೆಳೆಯುವ ಪ್ರಯತ್ನವನ್ನಷ್ಟೇ ನಿರಂತರವಾಗಿ ಮಾಡಿಕೊಂಡು ಬಂದಿವೆ. ಇದನ್ನೆಲ್ಲ ರಾಜಕೀಯ ಉದ್ದೇಶಗಳಿಂದ ಮಾಡಲಾಗುತ್ತಿದೆ. ಅವರು ಎಲ್ಲ ಸಮಯದಲ್ಲಿಯೂ ನಮ್ಮ ಕಾಲೆಳೆಯುವುದನ್ನು ನಿಲ್ಲಿಸಿದರೆ ಅದೇ ನಮಗೆ ದೊಡ್ಡ ಬೆಂಬಲವಾಗುತ್ತದೆ’’ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ಪಾಲುದಾರರಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಶಿವಸೇನೆ ಮತ್ತು ಬಿಜೆಪಿ ನಡುವಿನ ಸಂಬಂಧ ತೀರ ಹಳಸಿದ್ದು, ಬಿಎಂಸಿ ಚುನಾವಣೆಯಲ್ಲಿ ಪರಸ್ಪರರ ವಿರುದ್ಧವಾಗಿ ಕಣಕ್ಕಿಳಿದಿವೆ. ಠಾಕ್ರೆಯವರ ‘ಬಾಸ್’ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಕಾಂಗ್ರೆಸ್‌ನ ಕಾರ್ಯದರ್ಶಿ ಅಲ್ ನಾಸಿರ್ ಝಕರಿಯಾ ಅವರು, ಪ್ರಜಾಪ್ರಭುತ್ವದಲ್ಲಿ ಯಾವುದೇ ‘ಬಾಸ್’ ಇಲ್ಲ, ಇಲ್ಲೇನಿದ್ದರೂ ಶ್ರೀಸಾಮಾನ್ಯನೇ ದೊಡ್ಡವನು ಎಂದು ಕುಟುಕಿದ್ದಾರೆ.





