ಹಣ ಪೂರೈಸುವ ಸಂಸ್ಥೆಯ ನಾಲ್ವರ ಬಂಧನ
ಚಂಡಿಗಡ, ಫೆ.11: ರೋಹ್ಟಕ್‌ನ ಗಾಂಧಿಕ್ಯಾಂಪ್ ಪ್ರದೇಶದ ಎಟಿಎಂನಿಂದ 30 ಲಕ್ಷ ಹಣ ಲೂಟಿ ಮಾಡಿ ಬಳಿಕ ದಾಖಲೆಗಳನ್ನು ನಾಶಪಡಿಸುವ ಉದ್ದೇಶದಿಂದ ಎಟಿಎಂ ಕೇಂದ್ರಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ, ಎಟಿಎಂಗಳಿಗೆ ಹಣ ಪೂರೈಸುವ ಸಂಸ್ಥೆಯ ನಾಲ್ವರನ್ನು ಬಂಧಿಸಲಾಗಿದೆ.
ಫೆ.8ರಂದು ಘಟನೆ ನಡೆದಿತ್ತು. ಅಂದು ಬೆಳಗ್ಗೆ ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿಯೋರ್ವ ಗಾಂಧಿಕ್ಯಾಂಪ್ ಪ್ರದೇಶದ ಎಟಿಎಂ ಕೇಂದ್ರಕ್ಕೆ ಬೆಂಕಿ ಬಿದ್ದಿರುವುದಾಗಿ ತಿಳಿಸಿದ್ದ. ಸ್ಥಳಕ್ಕೆ ಧಾವಿಸಿದ ಪೊಲೀಸರು ಬಳಿಕ ಅಗ್ನಿಶಾಮಕ ದಳಕ್ಕೆ ಫೋನ್ ಮಾಡಿದ್ದರು. ಮುಂಜಾವಿನ ವೇಳೆ ಮೂವರು ಕಳ್ಳರು ಎಟಿಎಂ ಒಳನುಗ್ಗಿ ತನ್ನನ್ನು ಕಟ್ಟಿಹಾಕಿ ಮೊಬೈಲ್ ಕಿತ್ತುಕೊಂಡಿದ್ದರು ಎಂದು ಈ ಸಂದರ್ಭ ಎಟಿಎಂನ ಭದ್ರತಾ ಸಿಬ್ಬಂದಿ ತಿಳಿಸಿದ್ದ. ಈ ಮಾಹಿತಿ ಆಧಾರದಲ್ಲಿ ತನಿಖೆ ತೀವ್ರಗೊಳಿಸಿದ ಪೊಲೀಸರು ಅರುಣ್ ಯಾದವ್, ಬಲ್‌ರಾಜ್, ಸುಖ್‌ವೀಂದರ್ ಮತ್ತು ಜಲ್‌ಬೀರ್ ಎಂಬ ಆರೋಪಿಗಳನ್ನು ಬಂಧಿಸಿದ್ದರು. ಎಟಿಎಂಗಳಿಗೆ ಹಣ ಪೂರೈಸುವ ಸಂಸ್ಥೆಯಲ್ಲಿ ಅರುಣ್ ಮತ್ತು ಬಲ್‌ರಾಜ್ ಹಣ ತುಂಬಿಸುವ ಕಾರ್ಯ ಮಾಡುತ್ತಿದ್ದರೆ, ಸುಖ್‌ವೀಂದರ್ ಮತ್ತು ಜಲ್‌ಬೀರ್ ಗನ್‌ಮ್ಯಾನ್‌ಗಳಾಗಿದ್ದರು. ಎಟಿಎಂಗೆ ತುಂಬಿಸಲು ಒಟ್ಟು 2.5 ಕೋಟಿ ರೂ. ಇವರ ಕೈಯಲ್ಲಿ ನೀಡಲಾಗಿದ್ದು ಈ ಮೊತ್ತದಲ್ಲಿ 30 ಲಕ್ಷ ರೂ. ಲೂಟಿ ಮಾಡಲು ಇವರು ಸಂಚು ಹೂಡಿದ್ದರು. ಅದರಂತೆ ಗಾಂಧಿಕ್ಯಾಂಪ್ ಎಟಿಎಂನಲ್ಲಿ ಕೇವಲ 4 ಲಕ್ಷ ರೂ. ಹಣ ತುಂಬಿಸಿ, ದಾಖಲೆ ಪತ್ರದಲ್ಲಿ 34 ಲಕ್ಷ ರೂ. ತುಂಬಿಸಿದಂತೆ ತೋರಿಸಿದ್ದರು. ಬಳಿಕ ರಾತ್ರಿ ವೇಳೆ ಮತ್ತೆ ಅಲ್ಲಿಗೆ ಆಗಮಿಸಿ, ಕಾವಲುಗಾರನನ್ನು ಕಟ್ಟಿ ಹಾಕಿ ಎಟಿಎಂ ಕೇಂದ್ರಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಕಳೆದ ಎರಡ್ಮೂರು ವರ್ಷಗಳಿಂದ ಈ ಸಂಸ್ಥೆಯಲ್ಲಿ ದುಡಿಯುತ್ತಿದ್ದು ಇವರ ಬಳಿಯಿಂದ ಒಟ್ಟು 27.5 ಲಕ್ಷ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.





