ಉತ್ತರ ಪ್ರದೇಶ: ಅಖಿಲೇಶ್,ರಾಹುಲ್‌ರಿಂದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಬಿಡುಗಡೆ
ಲಕ್ನೋ,ಫೆ.11: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 403 ಕ್ಷೇತ್ರಗಳ ಪೈಕಿ 300ರಲ್ಲಿ ಗೆಲುವಿನ ಮೇಲೆ ಕಣ್ಣಿಟಿರುವ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ತಮ್ಮ ಮೈತ್ರಿಕೂಟದ ಹತ್ತಂಶಗಳ ಸಾಮಾನ್ಯ ಕನಿಷ್ಠ ಕಾರ್ಯಕ್ರಮ(ಸಿಎಂಪಿ)ವನ್ನು ಇಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಬಿಡುಗಡೆಗೊಳಿಸಿದರು. ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ ಸಿಎಂಪಿ ಆಧಾರದಲ್ಲಿ ಆಡಳಿತವನ್ನು ನಡೆಸಲಿದೆ.
ಸಿಎಂಪಿಯು ಎಸ್ಪಿ ಮತ್ತು ಕಾಂಗ್ರೆಸ್ ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ರಾಜ್ಯದ ಜನತೆಗೆ ನೀಡಿರುವ ಪ್ರಮುಖ ಭರವಸೆಗಳನ್ನು ಒಳಗೊಂಡಿದೆ. ಯುವಜನರಿಗೆ ಉಚಿತ ಸ್ಮಾರ್ಟ್‌ಫೋನ್‌ಗಳ ವಿತರಣೆ, 20 ಲಕ್ಷ ಯುವಜನರಿಗೆ ಕೌಶಲಾಭಿವೃದ್ಧಿಯ ಮೂಲಕ ಉದ್ಯೋಗ ಖಾತ್ರಿ, ಕೃಷಿಕರ ಸಾಲ ಮನ್ನಾ, ಅಗ್ಗದರದಲ್ಲಿ ವಿದ್ಯುತ್ ಪೂರೈಕೆ, ಬೆಳೆಗಳಿಗೆ ಸೂಕ್ತ ಬೆಲೆ, ಒಂದು ಕೋಟಿ ಬಡಕುಟುಂಬಗಳಿಗೆ ಮಾಸಿಕ 1,000 ರೂ.ಪಿಂಚಣಿ, ನಗರ ಪ್ರದೇಶಗಳ ಬಡವರಿಗೆ 10 ರೂ.ಗೆ ಒಂದು ಹೊತ್ತಿನ ಆಹಾರ, ಮಹಿಳೆಯರಿಗೆ ಸರಕಾರಿ ನೌಕರಿಗಳಲ್ಲಿ ಶೇ.33 ಹಾಗೂ ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಶೇ.50 ಮೀಸಲಾತಿ, ಐದು ವರ್ಷಗಳಲ್ಲಿ ಪ್ರತೀ ಗ್ರಾಮಕ್ಕೆ ವಿದ್ಯುತ್, ರಸ್ತೆ ಮತ್ತು ನೀರು ಇವು ಸಿಎಂಪಿಯಲ್ಲಿರುವ ಪ್ರಮುಖ ಭರವಸೆಗಳಾಗಿವೆ. ಜೊತೆಗೆ 9 ಮತ್ತು 10ನೆ ತರಗತಿಗಳ ವಿದ್ಯಾರ್ಥಿನಿಯರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್, 10 ಲಕ್ಷಕ್ಕೂ ಅಧಿಕ ಬಡ ದಲಿತ ಮತ್ತು ಹಿಂದುಳಿದ ಕುಟುಂಬಗಳಿಗೆ ಉಚಿತ ಮನೆಗಳು, ರಾಜ್ಯದ ಎಲ್ಲ ಜಿಲ್ಲೆಗಳನ್ನು ಸಂಪರ್ಕಿಸುವ ಚತುಷ್ಪಥ ರಸ್ತೆಗಳು ಮತ್ತು ಆರು ಪ್ರಮುಖ ನಗರಗಳಲ್ಲಿ ಮೆಟ್ರೋ ರ್ಯೆಲು ಸೌಲಭ್ಯ ಇವೂ ಸಿಎಂಪಿಯಲ್ಲಿ ಸೇರಿವೆ. ಜೊತೆಗೆ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳಿಗೂ ಸಾಕಷ್ಟು ಸೌಲಭ್ಯಗಳ ಭರವಸೆ ನೀಡಲಾಗಿದೆ.





