ನನ್ನ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಸಮರ್ಥನೀಯವಲ್ಲ: ನ್ಯಾ.ಕರ್ಣನ್
ಹೊಸದಿಲ್ಲಿ,ಫೆ.11: ಸರ್ವೋಚ್ಚ ನ್ಯಾಯಾಲಯವು ತನ್ನ ವಿರುದ್ಧ ಆರಂಭಿಸಿರುವ ನ್ಯಾಯಾಂಗ ನಿಂದನೆ ಕ್ರಮವನ್ನು ತಳ್ಳಿಹಾಕಿರುವ ಕಲ್ಕತ್ತಾ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾ.ಸಿ.ಎಸ್.ಕರ್ಣನ್ ಅವರು, ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ವಿರುದ್ಧ ಕ್ರಮ ಕಾನೂನಿನಡಿ ಸಮರ್ಥನೀಯವಲ್ಲ ಎಂದು ಪ್ರತಿಪಾದಿಸಿದ್ದಾರೆ. ಈ ವಿಷಯವನ್ನು ಸಂಸತ್ತಿನ ಪರಿಶೀಲನೆಗೆ ಒಪ್ಪಿಸುವಂತೆ ಅವರು ಸರ್ವೋಚ್ಚ ನ್ಯಾಯಾಲಯವನ್ನು ಕೋರಿದ್ದಾರೆ.
ದಲಿತ ವಿಷಯವನ್ನು ಮತ್ತೆ ಪ್ರಸ್ತಾಪಿಸಿರುವ ಅವರು, ಮೇಲ್ಜಾತಿಯ ನ್ಯಾಯಾಧೀಶರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಸೇರಿದ ನ್ಯಾಯಾಧೀಶರನ್ನು ತೊಲಗಿಸಲು ಬಯಸಿದ್ದಾರೆ ಎಂದು ಆರೋಪಿಸಿದ್ದಾರೆ.
ನ್ಯಾ.ಕರ್ಣನ್ ಅವರು,ಸರ್ವೋಚ್ಚ ನ್ಯಾಯಾಲಯ ಮತ್ತು ಮದ್ರಾಸ್ ಉಚ್ಚ ನ್ಯಾಯಾಲಯದ 20 ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಹೊರಿಸಿ ಈ ವರ್ಷದ ಜ.21ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ವೋಚ್ಚ ನ್ಯಾಯಾಲಯವು ಅವರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಆರಂಭಿಸಿದೆಯಲ್ಲದೆ,ಅವರ ನ್ಯಾಯಿಕ ಮತ್ತು ಆಡಳಿತಾತ್ಮಕ ಅಧಿಕಾರಗಳನ್ನು ಕಿತ್ತುಕೊಂಡಿದೆ.
ದಲಿತ ನ್ಯಾಯಾಧೀಶನಾಗಿರುವ ನನ್ನ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಸ್ವಯಂ ಪ್ರೇರಿತ ಕ್ರಮವು ಅನೈತಿಕವಾಗಿದೆ ಮತ್ತು ಎಸ್ಸಿ/ಎಸ್ಟಿ ಕಾಯ್ದೆಯ ವಿರುದ್ಧವಾಗಿದೆ ಎದು ನ್ಯಾ.ಕರ್ಣನ್ ಫೆ.9ರಂದು ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್‌ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಖಂಡಿತವಾಗಿಯೂ ಇದೊಂದು ರಾಷ್ಟ್ರೀಯ ವಿಷಯವಾಗಿದೆ ಮತ್ತು ಇದನ್ನು ಸಂಸತ್ತಿನ ಪರಿಶೀಲನೆಗೆ ಒಪ್ಪಿಸುವುದು ಬುದ್ಧಿ ವಂತಿಕೆಯ ನಿರ್ಧಾರವಾಗುತ್ತದೆ ಎಂದೂ ಅವರು ಬರೆದಿದ್ದಾರೆ.





