ಭಾರತಕ್ಕಿಂತ ಅಮೆರಿಕದಲ್ಲಿ ಲಿಂಗತಾರತಮ್ಯ ಅಧಿಕ: ಕೇಂದ್ರ ಸಚಿವ
ಅಮರಾವತಿ, ಫೆ.11: ಭಾರತದಲ್ಲಿ ಮಹಿಳೆಯರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಹಿಂಸೆ ನಡೆಯುತ್ತಿದೆ ಎಂದು ತಪ್ಪು ಚಿತ್ರಣ ನೀಡಲಾಗುತ್ತಿದೆ. ವಾಸ್ತವವಾಗಿ ಅಮೆರಿಕದಂತಹ ದೇಶಗಳಲ್ಲಿ ಭಾರತಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಲಿಂಗತಾರತಮ್ಯ ಧೋರಣೆಯಿದೆ ಎಂದು ಕೇಂದ್ರ ಸಚಿವ ವೈ.ಎಸ್.ಚೌಧರಿ ಹೇಳಿದ್ದಾರೆ. ನಮ್ಮ ದೇಶದಲ್ಲಿ ಮಹಿಳೆಯರಿಗೆ ಹಿಂಸೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ ಎಂಬ ಚಿತ್ರಣವನ್ನು ನೀಡಲಾಗುತ್ತಿದೆ. ಆದರೆ ಇದು ಸುಳ್ಳು ಎಂದು ನನಗನಿಸುತ್ತದೆ. ಹಿಂಸೆ ಎಲ್ಲೆಡೆಯೂ ಇದೆ. ಭಾರತಕ್ಕಿಂತ ಹೆಚ್ಚು ಲಿಂಗತಾರತಮ್ಯದ ಧೋರಣೆ ಅಮೆರಿಕದಲ್ಲಿದೆ ಎಂದು ಚೌಧರಿ ಹೇಳಿದರು. ಇಲ್ಲಿ ನಡೆದ ಪ್ರಥಮ ರಾಷ್ಟ್ರೀಯ ಮಹಿಳಾ ಮಹಾಸಭೆಯಲ್ಲಿ ಅವರು ಮಾತನಾಡಿದರು. ಭಾರತದಲ್ಲಿ ಮಹಿಳೆಯರಿಗೆ ಹೆಚ್ಚಿನ ಗೌರವ ನೀಡಲಾಗುತ್ತಿದ್ದು ಮಹಿಳೆಯರ ಶಿಕ್ಷಣ, ಮಹಿಳಾ ಸಶಕ್ತೀಕರಣಕ್ಕೆ ಹೆಚ್ಚಿನ ಗಮನ ನೀಡಲಾಗಿದೆ ಎಂದ ಅವರು, ಮಹಿಳೆಯರು ಹಿಂದುಳಿಯಲು ಅವರ ಯೋಚನಾಲಹರಿ ಮತ್ತು ಮನೋಭಾವ ಕಾರಣ. ಪುರುಷ ಮತ್ತು ಮಹಿಳೆಯರ ನಡುವಿನ ಪರಸ್ಪರ ಅವಲಂಬನೆಯ ಮಹತ್ವವನ್ನು ಜನರು ಅರಿತುಕೊಳ್ಳಬೇಕಿದೆ ಎಂದರು. ಆಂಧ್ರಪ್ರದೇಶ ವಿಧಾನಸಭೆಯ ಆಶ್ರಯದಲ್ಲಿ ‘ಮಹಿಳಾ ಸಶಕ್ತೀಕರಣ- ಪ್ರಜಾಪ್ರಭುತ್ವದ ಸದೃಢೀಕರಣ’ ಎಂಬ ವಿಷಯದಲ್ಲಿ ಮೂರು ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೌದ್ಧ ಧರ್ಮಗುರು ದಲಾಯಿ ಲಾಮಾ, ಕೇಂದ್ರ ಸಚಿವರಾದ ಎಂ.ವೆಂಕಯ್ಯ ನಾಯ್ಡು ಮತ್ತು ಪಿ.ಅಶೋಕ್ ಗಜಪತಿರಾಜು, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪುದುಚೇರಿಯ ಲೆ.ಗ.ಕಿರಣ್ ಬೇಡಿ, ಬಾಂಗ್ಲಾದೇಶದ ಪಾರ್ಲಿಮೆಂಟಿನ ಸ್ಪೀಕರ್ ಶಿರೀನ್ ಚೌಧರಿ, ಗಾಂಧೀವಾದಿ ಇಳಾ ಭಟ್, ಸಿನೆಮಾ ನಟಿ ಮನೀಷಾ ಕೊಯಿರಾಲಾ ಮುಂತಾದವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.





