ಕಾಂಗ್ರೆಸ್ ಇಲ್ಲದಿದ್ದರೆ ಮೋದಿ ಸೋಮಾಲಿಯದಲ್ಲಿ ಆಳ್ವಿಕೆ ನಡೆಸಬೇಕಿತ್ತು: ಶಿವಸೇನೆ
.jpg)
ಹೊಸದಿಲ್ಲಿ.ಫೆ.12: ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ವಿರುದ್ಧ ಮೋದಿಯ ರೈನ್‌ಕೋಟು ಟೀಕೆಯ ಬೆನ್ನಿಗೆ ಶಿವಸೇನೆ ಕಾಂಗ್ರೆಸ್ ಪ್ರಧಾನಿಗಳನ್ನು ಹೊಗಳಿ ಮೋದಿಗೆ ಪ್ರತಿಯೇಟು ನೀಡಿದೆ. ಜಾಗತಿಕ ರಾಷ್ಟ್ರಗಳ ನಡುವೆ ಭಾರತವನ್ನು ಇಷ್ಟು ಎತ್ತರಕ್ಕೆ ಏರಿಸಲು ಈ ಹಿಂದಿನ ಕಾಂಗ್ರೆಸ್ ಸರಕಾರಗಳೇ ಕಾರಣವಾಗಿದೆ ಎಂದು ಶಿವಸೇನೆ ಹೇಳಿದೆ. ಶಿವಸೇನೆಯ ಮುಖವಾಣಿ ಸಾಮ್ನಾ ಕಾಂಗ್ರೆಸ್ ಪ್ರಧಾನಿಗಳನ್ನು ಹೊಗಳಿ ಸಂಪಾದಕೀಯ ಬರೆದಿದೆ.
ಇಂದಿರಾಗಾಂಧಿ ದೇಶಕ್ಕಾಗಿ ತ್ಯಾಗವನ್ನು ಸಹಿಸಿದರು. ರಾಜೀವ್ ಗಾಂಧಿ ಅವರಿಗಿಂತ ಭಿನ್ನವಾಗಿದ್ದರು. ಆದರೂ ಆಡಳಿತದಲ್ಲಿ ಸುಧಾರಣೆ ತರಲು ಅವರು ಶ್ರಮಿಸಿದರು. ಬೋಫೊರ್ಸ್ ಭೃಷ್ಟಾಚಾರದಲ್ಲಿ ಶಾಮಿಲಾಗಿದ್ದರೂ ಅವರು ದೇಶಕ್ಕೆ ಕಂಪ್ಯೂಟರ್ ತರಲು, ಟೆಲಿಕಾಂ ಕ್ರಾಂತಿಗೆ ಅಡಿಪಾಯ ಹಾಕಿಕೊಟ್ಟಿದ್ದಾರೆಂದು ಸಾಮ್ನಾ ಹೇಳಿದೆ.
ನರಸಿಂಹ ರಾವ್, ಡಾ. ಮನಮೋಹನ ಸಿಂಗ್ ದೇಶದಲ್ಲಿ ಆರ್ಥಿಕ ಅರಾಜಕತೆಯುಂಟಾಗದಂತೆ ನಿಯಂತ್ರಿಸಿದರು. ಕಳೆದ ಅರುವತ್ತು ವರ್ಷಗಳಲ್ಲಿ ಇವರಿಲ್ಲದಿರುತ್ತಿದ್ದರೆ ನರೇಂದ್ರ ಮೋದಿಯ ಅವಸ್ಥೆ ಪರಿತಾಪಕರವಾಗಿರುತ್ತಿತ್ತು. ಸೋಮಾಲಿಯ ಬುರುಂಡಿಯಂತಹ ದೇಶ ಭಾರತ ಆಗಿರುತ್ತಿತ್ತು. ಕೈಯಲ್ಲಿ ಧೂಳು ಮಾತ್ರ ಉಳಿದಿರುವ ಇಂತಹ ಒಂದು ದೇಶವನ್ನು ಆಳ್ವಿಕೆ ನಡೆಸಬೇಕಾದ ಅವಸ್ಥೆ ಮೋದಿಗಿರುತ್ತಿತ್ತು ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.
ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ನಡೆದಿದೆ. ಹಾಗಂತಹ ಅಭಿವೃದ್ಧಿಯಾಗಿಲ್ಲ ಎಂದು ಹೇಳುವುದು ಅಸಂಬದ್ಧವಾಗಿದೆ. ಕಳೆದ ಎರಡು ವರ್ಷಗಳಿಂದ ಆರ್ಥಿಕ ವಾಣಿಜ್ಯ ಕ್ಷೇತ್ರಗಳಲ್ಲಿ ಏನೂ ಆಗಿಲ್ಲ. ಸತ್ಯ ಹೇಳುವವರನ್ನು ಸಹಿಸಿಕೊಳ್ಳಬೇಕು. ಅವರನ್ನು ದೇಶದ್ರೋಹಿ ಎಂದು ಕರೆಯುವ ಕೆಲಸಮಾಡಬಾರದು.
1971ರಲ್ಲಿ ಇಂದಿರಾಗಾಂಧಿ ಪಾಕಿಸಾನಕ್ಕೆ ಯುದ್ಧದ ಮೂಲಕ ಪಾಠ ಕಲಿಸಿದರು. ಯಾರೊಂದಿಗೂ ದ್ವಂದ್ವ ನೀತಿ ತೋರಿಸಿಲ್ಲ. ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದರು. ಈಗ ಗಡಿಯಲ್ಲಿ ಅಕ್ರಮ ಗಲಭೆ ಹೆಚ್ಚಳವಾಗಿದೆ. ಪಾಕಿಸ್ತಾನದೊಂದಿಗೆ ಮಾತಾಡುವುದಕ್ಕೋ ಇತರ ಕ್ರಮ ಕೈಗೊಳ್ಳುವುದಕ್ಕೋ ಮೋದಿ ಸಿದ್ಧರಿಲ್ಲ ಎಂದು ಸಾಮ್ನಾ ಪ್ರಧಾನಿ ಮೋದಿಯನ್ನು ಟೀಕಿಸಿದೆ ಎಂದು ವರದಿತಿಳಿಸಿದೆ.







