ಪನ್ನೀರ್‌ಗೆ ಇನ್ನೂ ಮೂವರು ಸಂಸದರ ಬೆಂಬಲ

ಚೆನ್ನೈ,ಫೆ.12: ಆಡಳಿತ ಎಡಿಎಂಕೆ ಪಕ್ಷದಲ್ಲಿ ಅಧಿಕಾರಕ್ಕಾಗಿ ತೀವ್ರ ಕಚ್ಚಾಟದ ನಡುವೆಯೇ ಇನ್ನೂ ಮೂರು ಸಂಸದರು ಬೆಂಬಲ ವ್ಯಕ್ತಪಡಿಸುವುದರೊಂದಿಗೆ ಮುಖ್ಯಮಂತ್ರಿ ಒ.ಪನ್ನೀರಸೆಲ್ವಂ ಅವರ ಪಾಳಯವು ರವಿವಾರ ತನ್ನ ಬಲವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ.
ಲೋಕಸಭಾ ಸಂಸದರಾದ ಜೈಸಿಂಗ್ ತ್ಯಾಗರಾಜ್ ನಟ್ಟೇರ್ಜಿ(ತೂತುಕುಡಿ), ಸೆಂಗುಟ್ಟವನ್(ವೆಲ್ಲೂರು) ಮತ್ತು ಆರ್.ಪಿ.ಮರುತ್‌ರಾಜಾ(ಪೆರಂಬಲೂರು) ಅವರು ಇಂದು ಬೆಳಿಗ್ಗೆ ಪನ್ನೀರಸೆಲ್ವಂ ಅವರ ಗ್ರೀನ್‌ವೇಸ್ ರೋಡ್ ನಿವಾಸಕ್ಕೆ ತೆರಳಿ ಅವರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
ಇತರ ನಾಲ್ವರು ಲೋಕಸಭಾ ಸಂಸದರಾದ ಪಿ.ಆರ್.ಸುಂದರಂ, ಕೆ.ಅಶೋಕಕುಮಾರ್, ವಿ.ಸತ್ಯಭಾಮಾ ಮತ್ತು ವನರೋಜಾ ಅವರು ಈಗಾಗಲೇ ಪನ್ನೀರ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜ್ಯಸಭಾ ಸಂಸದ ವಿ.ಮೈತ್ರೇಯನ್ ಅವರು ಸಹ ಪನ್ನೀರ್ ಪಾಳಯದಲ್ಲಿದ್ದಾರೆ.
ಪನ್ನೀರ್ ಈಗಾಗಲೇ ತಾನೂ ಸೇರಿದಂತೆ ಏಳು ಶಾಸಕರ ಬೆಂಬಲ ಹೊಂದಿದ್ದಾರೆ. 235 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಎಡಿಎಂಕೆ 135 ಶಾಸಕರನ್ನು ಹೊಂದಿದೆ.
ಎಡಿಎಂಕೆ ಮೀನುಗಾರಕೆ ಘಟಕದ ಜಂಟಿ ಕಾರ್ಯದರ್ಶಿ ಕೆ.ಎ.ಜಯಪಾಲ್, 2011-16ರ ಅವಧಿಯಲ್ಲಿ ಜಯಲಲಿತಾ ಸರಕಾರದಲ್ಲಿ ಸಚಿವರಾಗಿದ್ದ ಈರೋಡ್‌ನ ಮಾಜಿ ಮೇಯರ್ ಮಲ್ಲಿಕಾ ಪರಂಶಿವನ್ ಅವರೂ ಇಂದು ಪನ್ನೀರ್ ಪಾಳಯಕ್ಕೆ ಸೇರ್ಪಡೆಗೊಂಡರು.
ಎಡಿಎಂಕೆ 37 ಲೋಕಸಭಾ ಮತ್ತು 13 ರಾಜ್ಯಸಭಾ ಸದಸ್ಯರನ್ನು ಹೊಂದಿದೆ.







