ಯಕ್ಷಗಾನ ವೇಷಧಾರಿ ಕೊಕ್ಕಡ ಈಶ್ವರ ಭಟ್ಟರಿಗೆ ಅಭಿನಂದನಾ ಕಾರ್ಯಕ್ರಮ
ಸುಸಂಸ್ಕೃತ ಗುಣ ಪ್ರತಿಯೊಬ್ಬನನ್ನು ಉನ್ನತ್ತಿಯತ್ತ ಕೊಂಡೊಯ್ಯುತ್ತದೆ- ಸ್ವಾಮೀಜಿ

ಪುತ್ತೂರು,ಫೆ.12: ನಮ್ರತಾ ಭಾವ ಉನ್ನತಿಗೆ ಕಾರಣವಾಗುತ್ತದೆ. ಅಹಂ ಭಾವ ತೋರದೆ, ಹಿರಿಯರಿಗೆ, ಸಮಾಜಕ್ಕೆ ತಗ್ಗಿ- ಬಗ್ಗಿ ನಡೆಯುವ ಸುಸಂಸ್ಕೃತ ಗುಣ ಪ್ರತಿಯೊಬ್ಬನನ್ನು ಉನ್ನತ್ತಿಯತ್ತ ಕೊಂಡೊಯ್ಯುತ್ತದೆ ಎಂದು ಎಡನೀರು ಮಠದ ಶ್ರೀ ಕೇಶವಾನಂದಭಾರತೀ ಸ್ವಾಮೀಜಿ ಹೇಳಿದರು.
ಕೊಕ್ಕಡ ಈಶ್ವರ ಭಟ್ ಅಭಿನಂದನ ಸಮಿತಿ ಆಶ್ರಯದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯ ನಟರಾಜ ವೇದಿಕೆಯಲ್ಲಿ ಶನಿವಾರ ಸಂಜೆ ನಡೆದ ಹಿರಿಯ ಯಕ್ಷಗಾನ ಸ್ತ್ರೀ ವೇಷಧಾರಿ ಕೊಕ್ಕಡ ಈಶ್ವರ ಭಟ್ ಅವರ ಅಭಿನಂದನ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಹಿರಿಯರನ್ನು ಗೌರವಿಸುವ, ಕಲೆಯನ್ನು ಗುರುತಿಸುವ ಕಾರ್ಯ ಮಹತ್ವದ್ದು. ಹಿರಿಯ ಯಕ್ಷಗಾನ ಸ್ತ್ರೀ ವೇಷಧಾರಿ ಕೊಕ್ಕಡ ಈಶ್ವರ ಭಟ್ ಅವರಂತಹ ಶಿಸ್ತಿನ ಕಲಾವಿದರನ್ನು ಸುಧರ್ಮ ಸಭೆಯಲ್ಲಿ ಸಮ್ಮಾನಿಸುವುದು ಶ್ರೇಷ್ಠ ಕಾರ್ಯ ಎಂದು ಅವರು ನುಡಿದರು. ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ಅವರು ಈಶಾನ ಅಭಿನಂದನ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿ, ತೆಂಕು ಮತ್ತು ಬಡಗು ತಿಟ್ಟಿನ ರಂಗದಲ್ಲಿ ಸ್ತ್ರೀ ವೇಷಧಾರಿಯಾಗಿ ಈಶ್ವರ ಭಟ್ ತೋರಿದ ರಂಗಸಾಧನೆ ಅದ್ಭುತವಾದದು. ಎರಡು ತಿಟ್ಟಿನಲ್ಲಿ ಯಶಸ್ವಿ ಪಾತ್ರ ನಿರ್ವಹಿಸಿದ ಬೆರೆಳೆಣಿಕೆಯ ಕಲಾವಿದರಲ್ಲಿ ಇವರು ಒಬ್ಬರು ಎಂದರು.
ಸಂಶೋಧಕ, ಕಲಾಚಿಂತಕ ಡಾ.ಎಂ.ಪ್ರಭಾಕರ ಜೋಶಿ ಮಾತನಾಡಿ, ಸ್ತ್ರೀ ವೇಷ ಅಂದರೆ ಪಾತ್ರ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರಿಗೆ ಅದು ಐಟಂ ಡ್ಯಾನ್ಸ್ ಎಂಬ ಭಾವನೆ ಮೂಡಿದೆ. ಹಾಗಾಗಿ ಈಶ್ವರ ಭಟ್ ಕೊಕ್ಕಡ ಅವರ ಕಾಲದ ಯಕ್ಷಗಾನ ಸ್ತ್ರೀ ವೇಷಧಾರಿಗಳ ಪರಂಪರೆ ಇಂದಿನ ಕಾಲದಲ್ಲಿ ಮತ್ತೆ ಕಾಣಬೇಕಿದೆ ಎಂದರು.
ಕಟೀಲು ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಹರಿನಾರಾಯಣ ಅಸ್ರಣ್ಣ ಅಧ್ಯಕ್ಷತೆ ವಹಿಸಿದ್ದರು. ಬಡತನ ಇದ್ದ ಕಾಲಘಟ್ಟದಲ್ಲಿ ಯಕ್ಷಗಾನ ಕಲಾ ಶ್ರೀಮಂತಿಕೆ ಮೆರೆದಿತ್ತು. ಇಂದು ಆರ್ಥಿಕವಾಗಿ ಶ್ರೀಮಂತಿಕೆ ಇದ್ದರೂ ಕಲಾ ಶ್ರೀಮಂತಿಕೆ ಕೆಳಮಟ್ಟಕ್ಕೆ ಕುಸಿಯುತ್ತಿದೆ. ಕೊಕ್ಕಡ ಈಶ್ವರ ಭಟ್ ಅವರಂತಹ ಮೌಲ್ಯಯುತ ಕಲಾಸಾಧಕರ ಅವಶ್ಯಕತೆ ಇಂದಿದೆ ಎಂದವರು ನುಡಿದರು.
ಕೊಕ್ಕಡ ಈಶ್ವರ ಭಟ್ ದಂಪತಿಗಳನ್ನು ಎಡನೀರು ಶ್ರೀಗಳು ಸಮ್ಮಾನಿಸಿದರು. ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ ಪೆರುವೋಡಿ ನಾರಾಯಣ ಭಟ್ ಮತ್ತು ಪುತ್ತೂರು ನೂಜಿ ಶಂಕರಿ ಅಮ್ಮ ಅವರಿಗೆ ಅಭಿವಂದನೆ ಸಲ್ಲಿಸಲಾಯಿತು. ಹಿರಿಯ ಯಕ್ಷಗಾನ ಕಲಾವಿದ ಕೆ.ಎಚ್.ದಾಸಪ್ಪ ರೈ, ರವಿ ಅಲೆವೂರಾಯ ಅವರು ಅಭಿನಂದನ ನುಡಿಗಳನ್ನಾಡಿದರು.
ಧರ್ಮಸ್ಥಳ ಜಮಾ ಉಗ್ರಾಣ ಹಿರಿಯ ಮುತ್ಸದ್ದಿ ಬಿ.ಭುಜಬಲಿ, ಉಪಾಧ್ಯಕ್ಷರಾದ ಭಾಸ್ಕರ ಬಾರ್ಯ, ಈಶ್ವರ ಭಟ್ ಗುಂಡ್ಯಡ್ಕ, ಪ್ರಧಾನ ಕಾರ್ಯದರ್ಶಿ ಗಣರಾಜ ಕುಂಬ್ಳೆ, ಪಾತಾಳ ಅಂಬಾಪ್ರಸಾದ, ಉಮೇಶ್ ಹೆನ್ನಾಳ ಉಪಸ್ಥಿತರಿದ್ದರು. ಅಭಿನಂದನ ಸಮಿತಿ ಕಾರ್ಯಾಧ್ಯಕ್ಷ ಡಾ.ತಾಳ್ತಜೆ ವಸಂತ ಕುಮಾರ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಗಣರಾಜ ಕುಂಬ್ಳೆ ವಂದಿಸಿದರು. ಜಿ.ಕೆ.ಭಟ್ ಸೇರಾಜೆ ನಿರೂಪಿಸಿದರು.







