ಬರಪೀಡಿತ ತಾಲೂಕು ಘೋಷಣೆಯಾದರೂ ಎಚ್ಚೆತ್ತುಕೊಳ್ಳದ ದ.ಕ. ಜಿಲ್ಲಾಡಳಿತ

ಸಾಂದರ್ಭಿಕ ಚಿತ್ರ
ಮಂಗಳೂರು, ಫೆ.12: ದ.ಕ.ಜಿಲ್ಲೆಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರು ಮತ್ತು ಬಂಟ್ವಾಳ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಲಾಗಿದ್ದರೂ ಕೂಡ ಜಿಲ್ಲಾಡಳಿತ ಇನ್ನೂ ಕೂಡ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡಿಲ್ಲ.
ಜ.10ರಂದು ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯ ನಡಾವಳಿಯ ಅನ್ವಯ ಜ.24ರಂದು ರಾಜ್ಯ ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ವಿಭಾಗವು ರಾಜ್ಯದ 160 ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಿಸಿದೆ. ಅದರಲ್ಲಿ ದ.ಕ.ಜಿಲ್ಲೆಯ ಮಂಗಳೂರು ಮತ್ತು ಬಂಟ್ವಾಳ ತಾಲೂಕು ಕೂಡ ಸೇರಿದೆ.
ಕೇಂದ್ರ ಸರಕಾರದ ಮಾರ್ಗಸೂಚಿಯ ಪ್ರಕಾರ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಆರ್.ರವಿಕುಮಾರ್ ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಅಂದರೆ, ಸತತ 6 ವಾರ ಮಳೆ ಸುರಿಯದಿದ್ದರೆ, ಒಣವಾತಾವರಣ ಕಂಡು ಬಂದರೆ, ಬೆಳೆಹಾನಿಯಾದರೆ, ಅಂತರ್ಜಲ ಕುಸಿದರೆ ಬರಪೀಡಿತ ತಾಲೂಕು ಎಂದು ಘೋಷಿಸಲು ಅವಕಾಶವಿದೆ.
ಮಂಗಳೂರು ಮತ್ತು ಬಂಟ್ವಾಳ ತಾಲೂಕಿನಲ್ಲಿ ಸೆ.1ರಿಂದ ಡಿ.31ರವರೆಗೆ ಶೇ.20ಕ್ಕಿಂತಲೂ ಕಡಿಮೆ ಮಳೆಯಾಗಿದೆ. ಮಂಗಳೂರಿನಲ್ಲಿ ಸರಾಸರಿ 301 ಮಿ. ಮೀ. ಮಳೆ ಸುರಿಯಬೇಕಿತ್ತು. ಆದರೆ, ಸುರಿದದ್ದು ಕೇವಲ 75 ಮಿ.ಮೀ. ಮಾತ್ರ. ಬಂಟ್ವಾಳದಲ್ಲಿ 337 ಮಿ.ಮೀ. ಮಳೆ ಸುರಿಯಬೇಕಿತ್ತು. ಅಲ್ಲೂ ಸುರಿದದ್ದು ಕೇವಲ 91 ಮಿ.ಮೀ. ಮಾತ್ರ.
ಫೆಬ್ರವರಿ ಮೊದಲ ವಾರದಲ್ಲೇ ಜಿಲ್ಲೆಯ ಹಲವು ಕಡೆ ನೀರಿನ ಸಮಸ್ಯೆ ಎದುರಾಗಿದೆ. ನೇತ್ರಾವತಿ ಬತ್ತಿದೆ. ತುಂಬೆ ಡ್ಯಾಂನಲ್ಲೂ ಸಾಕಷ್ಟು ನೀರಿಲ್ಲ. ಎತ್ತಿನಹೊಳೆ ಯೋಜನೆಯ ವಿರುದ್ಧ ಕಹಳೆಯೂ ಶುರುವಾಗಿದೆ. ಆದರೆ ಜಿಲ್ಲಾಡಳಿತ, ಸಚಿವರು, ಅಧಿಕಾರಿಗಳು ಈ ಘೋಷಣೆಯನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ.ಈ ನಿಟ್ಟಿನಲ್ಲಿ ಸಭೆ ನಡೆಸಿಲ್ಲ. ಬರಪೀಡಿತ ತಾಲೂಕಿನ ಸ್ಥಿತಿಗತಿಯ ಬಗ್ಗೆ ಸಮೀಕ್ಷೆ ಮಾಡಿಸಿಲ್ಲ. ಕಂದಾಯ ಇಲಾಖೆಯ ಘೋಷಣೆಗೂ-ತಮಗೂ ಸಂಬಂಧವಿಲ್ಲ ಎಂಬಂತೆ ಮೌನತಾಳಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿರುವುದು ಕೇವಲ ಭರವಸೆಗಳ ಸರಕಾರ. ಜಿಲ್ಲೆಯ ಉಸ್ತುವಾರಿ ಸಚಿವರ ತವರು ತಾಲೂಕನ್ನೂ ಕೂಡ ಬರಪೀಡಿತ ಎಂದು ಘೋಷಿಸಿದ ಬಳಿಕವೂ ಬರವನ್ನು ತಡೆಯಲು ಸೂಕ್ತ ಕ್ರಮ ಜರಗಿಸದಿರುವುದು ವಿಪರ್ಯಾಸ. ಮಳೆಯೇ ಬೀಳದ ಮೇಲೆ ಜಿಲ್ಲೆಯ ಜೀವನದಿಯಾದ ನೇತ್ರಾವತಿಯಲ್ಲಿ ನೀರು ಎಲ್ಲಿಂತ ಬಂತು? ನೀರೇ ಇಲ್ಲದ ಮೇಲೆ ಇವರು ಎತ್ತಿನಹೊಳೆ ಯೋಜನೆ ಮೂಲಕ ಕೋಲಾರಕ್ಕೆ ಎಲ್ಲಿಂದ ನೀರು ಕೊಡುತ್ತಾರೆ.
ಹರಿಕೃಷ್ಣ ಬಂಟ್ವಾಳ
ಎತ್ತಿನಹೊಳೆ ಯೋಜನೆ ವಿರುದ್ಧದ ಹೋರಾಟಗಾರರು







