ಮದ್ಯ ವ್ಯಸನಕ್ಕೆ ಸರಕಾರದ ನೀತಿಯೇ ಕಾರಣ: ಅನುಪಮಾ ಶೆಣೈ

ಉಡುಪಿ, ಫೆ.12: ಕುಡಿತ ಎಂಬುದು ಕೇವಲ ವೈಯಕ್ತಿಕ ಸಂಬಂಧಿಸಿದ ವ್ಯಸನ ಅಲ್ಲ. ಬದಲು ಸರಕಾರದ ನೀತಿಯಲ್ಲಿ ಇರುವ ಬಹಳ ದೊಡ್ಡ ತೊಡಕು ಕೂಡ ಆಗಿದೆ ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಹೇಳಿದ್ದಾರೆ.
ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ವತಿಯಿಂದ ಹಮ್ಮಿ ಕೊಳ್ಳಲಾದ ಮದ್ಯವ್ಯಸನಿಗಳ ಮಕ್ಕಳ ಜಾಗೃತಿ ಸಪ್ತಾಹವನ್ನು ರವಿವಾರ ಉಡುಪಿ ಬಡಗುಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ರಾಜ್ಯದಲ್ಲಿ ಮದ್ಯ ಮಾರಾಟ ಮಾಡಲು ಮುಖ್ಯಮಂತ್ರಿಗಳೇ ಗುರಿಯನ್ನು ನೀಡುತ್ತಾರೆ. ಆ ಮೂಲಕ ಮದ್ಯ ಸೇವಿಸುವುದಕ್ಕೆ ಸರಕಾರವೇ ಉತ್ತೇಜನ ನೀಡುತ್ತಿದೆ. ಹೀಗಿರುವಾಗ ಜನ ಮದ್ಯ ವ್ಯಸನಿಗಳಾಗದೆ ಇರುತ್ತಾೆಯೇ ಎಂದು ಅವರು ಪ್ರಶ್ನಿಸಿದರು.
ಸರಕಾರ ಹಾಗೂ ಅಧಿಕಾರಿಗಳಿಗೆ ಉದ್ಯೋಗ ಖಾತ್ರಿಯಂತಹ ಜನಪರ ವಾದ ಯೋಜನೆಗಳ ಗುರಿಯಲ್ಲಿ ಸಾಧನೆ ಮಾಡಲು ಆಗುವುದಿಲ್ಲ. ಆದರೆ ಮದ್ಯ ಮಾರಾಟದ ಗುರಿಯನ್ನು ತಲುಪಲು ಸಾಕಷ್ಟು ಶ್ರಮಿಸುತ್ತಾರೆ. ಮದ್ಯ ಮಾರಾಟಕ್ಕೆ ತೋರುವ ಕಾಳಜಿ ಉದ್ಯೋಗ ಖಾತ್ರಿಯಂತಹ ಯೋಜನೆ ಗಳಲ್ಲಿ ತೋರಿಸಲ್ಲ ಎಂದು ಅವರು ಕಟುವಾಗಿ ಟೀಕಿಸಿದರು.
ನಿರ್ಭಯ ಸೇರಿದಂತೆ ಬಹಳಷ್ಟು ಅತ್ಯಾಚಾರ ಪ್ರಕರಣಗಳ ಆರೋಪಿ ಗಳು ಮದ್ಯ ವ್ಯಸನಿಗಳಾಗಿದ್ದಾರೆ. ಕುಡಿದ ನಂತರ ಮನುಷ್ಯ ಪ್ರಾಣಿಗಳಿಗಿಂತ ಕೀಳಾಗಿ ವರ್ತಿಸುತ್ತಾರೆ. ಕುಡಿತ ಎಂಬುದು ಎಲ್ಲ ಅಪರಾಧಗಳಿಗೆ ಕಾರಣ ವಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ, ಕೌಟುಂಬಿಕ ಕಲಹ, ಗಲಭೆ, ರಸ್ತೆ ಅಪಘಾತಗಳಿಗೆ ಮುಖ್ಯ ಕಾರಣವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಬಡಗುಬೆಟ್ಟು ಕೋ-ಆಪರೇಟಿವ್ ಸೊಸೈಟಿಯ ಜನರಲ್ ಮೇನೆಜರ್ ಜಯಕರ ಶೆಟ್ಟಿ ಇಂದ್ರಾಳಿ, ಡಾ.ಎ.ವಿ.ಬಾಳಿಗ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ.ಭಂಡಾರಿ ಮಾತನಾಡಿದರು. ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ, ತ್ರಿವರ್ಣ ಆರ್ಟ್ಸ್ ಸೆಂಟರ್‌ನ ಕಲಾವಿದ ಹರೀಶ್ ಸಾಗಾ ಉಪಸ್ಥಿತರಿದ್ದರು.
ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ಪ್ರಾಸ್ತಾವಿಕವಾಗಿ ಮಾತ ನಾಡಿ ಸ್ವಾಗತಿಸಿದರು. ದೀಪಾಶ್ರೀ ವಂದಿಸಿದರು. ಮೋನಿಕಾ ಮತ್ತು ಪಂಚಮಿ ಕಾರ್ಯಕ್ರಮ ನಿರೂಪಿಸಿದರು.
ನಾನು ಲಿಕ್ಕರ್ ದಂಧೆಯ ಸಂತ್ರಸ್ತೆ
‘ನೀವು ಮದ್ಯ ವಸನಿಗಳ ಸಂತ್ರಸ್ತರಾದರೆ ನಾನು ಲಿಕ್ಕರ್ ದಂಧೆಯ ಸಂತ್ರಸ್ತೆ. ಅದರಿಂದಲೇ ನಾನು ಹುದ್ದೆಯನ್ನು ಕಳೆದುಕೊಂಡಿದ್ದೇನೆ’ ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಮದ್ಯವ್ಯಸನಿಗಳ ಮಕ್ಕಳನ್ನು ಉದ್ದೇಶಿಸಿ ಹೇಳಿದರು.
ಕೂಡ್ಲಿಗಿಯಲ್ಲಿ ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಲಿಕ್ಕರ್ ಲಾಭಿ ವಿರುದ್ಧ ಸಮರ ಸಾರಿದ್ದೆ. ಇದರ ಪರಿಣಾಮ ವರ್ಗಾವಣೆ ಶಿಕ್ಷೆ ಅನುಭವಿಸಬೇಕಾ ಯಿತು. ಆದರೂ ಅದರ ವಿರುದ್ಧ ಹೋರಾಟ ಮುಂದುವರೆಸಿದೆ. ಬಳಿಕ ಎರಡು ರಾಜೀನಾಮೆ ಪತ್ರ ಬರೆದೆ. ಅದರಲ್ಲಿ ಒಂದು ಪತ್ರ ಎಲ್ಲಿಗೆ ಹೊಯಿತು ಎಂಬುದರ ಬಗ್ಗೆ ಸುದ್ದಿಯೇ ಇಲ್ಲ ಎಂದರು.







