ಉತ್ತರ ಪ್ರದೇಶ ಚುನಾವಣೆ: ಪ್ರಚಾರಕಣದಲ್ಲಿ ಸೋನಿಯಾ, ಮುಲಾಯಂ, ಶಿವಪಾಲ್ ನಾಪತ್ತೆ
ಪ್ರಚಾರದಿಂದ ದೂರವುಳಿದ ಅತಿರಥ, ಮಹಾರಥರು

ಲಕ್ನೊ, ಫೆ.12: ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ ಪ್ರಥಮ ಹಂತದ ಮತದಾನ ಮುಗಿದಿದ್ದು ದ್ವಿತೀಯ ಹಂತದ ಚುನಾವಣಾ ಪ್ರಚಾರಕ್ಕೆ ಸೋಮವಾರ ತೆರೆ ಬೀಳಲಿದೆ. ಮುಲಾಯಂ ಸಿಂಗ್ ಯಾದವ್, ಸೋನಿಯಾ ಗಾಂಧಿ ಸೇರಿದಂತೆ ಪ್ರಮುಖ ಮುಖಂಡರ ಅನುಪಸ್ಥಿತಿ ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯ ವೈಶಿಷ್ಟವಾಗಿದೆ.
ರಾಜ್ಯದಲ್ಲಿ ಎಸ್ಪಿ ಮತ್ತು ಕಾಂಗ್ರೆಸ್ ಮಧ್ಯೆ ಚುನಾವಣಾ ಪೂರ್ವ ಮೈತ್ರಿ ಏರ್ಪಟ್ಟಿದ್ದು ಎಸ್ಪಿ ಮುಖಂಡ ಅಖಿಲೇಶ್ ಯಾದವ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಚಾರ ಕಾರ್ಯದ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮೈತ್ರಿ ಕುರಿತು ಮುನಿಸಿಕೊಂಡಿರುವ ಮುಲಾಯಂ ಆರಂಭದ ಎರಡು ಹಂತದ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದರೆ, ಅನಾರೋಗ್ಯದ ಕಾರಣ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿಲ್ಲ. ಸಮಾಜವಾದಿ ಪಕ್ಷದ ಮತ್ತೋರ್ವ ಪ್ರಮುಖ ನಾಯಕ ಶಿವಪಾಲ್ ಸಿಂಗ್ ತಮ್ಮ ಕ್ಷೇತ್ರಕ್ಕಷ್ಟೇ ಪ್ರಚಾರ ಕಾರ್ಯವನ್ನು ಸೀಮಿತಗೊಳಿಸಿದ್ದಾರೆ. ಅಷ್ಟೇ ಅಲ್ಲ, ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿದ್ದು , ಚುನಾವಣಾ ಫಲಿತಾಂಶದ ದಿನವಾದ ಮಾರ್ಚ್ 11ರಂದು ಹೊಸ ಪಕ್ಷದ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.
ತಮ್ಮ ಹಲವಾರು ಬೆಂಬಲಿಗರಿಗೆ ಟಿಕೆಟ್ ನಿರಾಕರಿಸಿರುವುದು ಮತ್ತು ಪಕ್ಷದ ಪ್ರಮುಖ ಪ್ರಚಾರಕರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕೈಬಿಟ್ಟಿರುವುದು ಶಿವಪಾಲ್ ಅಸಮಾಧಾನಕ್ಕೆ ಕಾರಣವಾಗಿದ್ದು, ಶಿವಪಾಲ್ ಪ್ರಚಾರ ಕಾರ್ಯದಿಂದ ದೂರವಿರುವುದು ಪಕ್ಷಕ್ಕೆ ಸಾಕಷ್ಟು ನಷ್ಟ ಉಂಟು ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಜೊತೆಗೆ, ಜಯಪ್ರದಾ ಮತ್ತು ಅಮರ್‌ಸಿಂಗ್ ಅವರನ್ನೂ ಈ ಬಾರಿ ದೂರ ಇಡಲಾಗಿದೆ. ಪಕ್ಷದ ಇನ್ನೋರ್ವ ಪ್ರಮುಖ ಮುಖಂಡ , ರಾಜ್ಯಸಭಾ ಸದಸ್ಯ ಬೇನಿ ಪ್ರಸಾದ್ ವರ್ಮ ಅವರೂ ಪ್ರಚಾರ ಕಾರ್ಯದಿಂದ ದೂರವೇ ಉಳಿದಿದ್ದಾರೆ. ತಮ್ಮ ಪುತ್ರ ರಾಕೇಶ್ ವರ್ಮಗೆ ಸೀಟು ನಿರಾಕರಿಸಿರುವುದು ಇವರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.
ಈ ಬಾರಿಯ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಇನ್ನಿಬ್ಬರು ಮುಖಂಡರ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಮತ್ತು ವಿಧಾನಸಭೆಯ ಮಾಜಿ ಸ್ಪೀಕರ್ ಕೇಸರಿನಾಥ್ ತ್ರಿಪಾಠಿ ಇವರಿಬ್ಬರು ಅನುಕ್ರಮವಾಗಿ ರಾಜಸ್ತಾನ ಮತ್ತು ಪಶ್ಚಿಮ ಬಂಗಾಲದ ರಾಜ್ಯಪಾಲರಾಗಿ ನಿಯುಕ್ತಿಗೊಂಡಿರುವ ಕಾರಣ ಚುನಾವಣಾ ಪ್ರಚಾರ ಕಾರ್ಯದಿಂದ ದೂರ ಉಳಿದಿದ್ದಾರೆ.