ಜಿದ್ದಾ ವಿಮಾನ ನಿಲ್ದಾಣದಲ್ಲಿ ಇರಾಕ್ ವಿಮಾನಕ್ಕೆ ಬೆಂಕಿ

ಜಿದ್ದಾ, ಫೆ. 12: ಸೌದಿ ಅರೇಬಿಯದ ಜಿದ್ದಾದಲ್ಲಿರುವ ಕಿಂಗ್ ಅಬ್ದುಲಝೀಝ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡುತ್ತಿರುವಾಗ ಇರಾಕಿ ಏರ್‌ವೇಸ್‌ನ ವಿಮಾನವೊಂದರ ಚಕ್ರದಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ಶನಿವಾರ ನಡೆದಿದೆ.
ತುರ್ತು ಕಾರ್ಯಾಚರಣಾ ಸಿಬ್ಬಂದಿ ತಕ್ಷಣ ಎಲ್ಲ 356 ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ್ದು, ಯಾರಿಗೂ ಗಾಯಗಳಾಗಿಲ್ಲ ಎಂದು ಸೌದಿ ಪ್ರೆಸ್ ಏಜನ್ಸಿ ತಿಳಿಸಿದೆ.
ವಿಮಾನ ಭೂಸ್ಪರ್ಶ ಮಾಡುತ್ತಿದ್ದಾಗ ಒಂದು ಚಕ್ರದಲ್ಲಿ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಪೈಲಟ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದರು. ತಕ್ಷಣ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.
ವಿಮಾನ ನಿಲ್ದಾಣದ ಪರಿಣತ ತಂಡಗಳು ವಿಮಾನದಿಂದ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿದವು.
Next Story





