ಸಿರಿಯ ನಿರಾಶ್ರಿತರಿಗೆ ನೆರವು ನೀಡುವ ಸೌದಿ ಆಂದೋಲನ ಚಳಿಗಾಲಕ್ಕೂ ವಿಸ್ತರಣೆ

ಅಮ್ಮಾನ್, ಫೆ. 12: ಲೆಬನಾನ್‌ನಲ್ಲಿರುವ ಸಿರಿಯ ನಿರಾಶ್ರಿತರಿಗೆ ನೆರವು ನೀಡುವ ‘ಸೌದಿ ರಾಷ್ಟ್ರೀಯ ಆಂದೋಲನ’ವು ಪರಿಹಾರ ವಿತರಿಸುವ ತನ್ನ ಕಾರ್ಯವನ್ನು ಚಳಿಗಾಲಕ್ಕೂ ವಿಸ್ತರಿಸಿದೆ.
ನೆರವನ್ನು ಐರೋನ್ಯ, ಸಿಡಾನ್, ವೌಂಟ್ ಲೆಬನಾನ್, ಬೆಕಾ ಮತ್ತು ಇತರ ಐದು ಸ್ಥಳಗಳಲ್ಲಿರುವ 2,882 ಸಿರಿಯ ಕುಟುಂಬಗಳು ಅಥವಾ 17,292 ಫಲಾನುಭವಿಗಳಿಗೆ ನೀಡಲಾಗುತ್ತಿದೆ.
ಹೊದಿಕೆಗಳು, ಜಾಕೆಟ್‌ಗಳು, ಸ್ವೆಟರ್‌ಗಳು, ಆಹಾರ ವಸ್ತುಗಳು, ಅಡುಗೆ ಪಾತ್ರೆಗಳು, ಮೇಜಿಗೆ ಹೊದಿಸುವ ವಸ್ತುಗಳು ಹಾಗೂ ವೈಯಕ್ತಿಕ ಸ್ವಚ್ಛತೆಯ ಸಾಮಗ್ರಿಗಳನ್ನು ನಿರಾಶ್ರಿತರಿಗೆ ವಿತರಿಸಲಾಗುತ್ತಿದೆ.
ಲೆಬನಾನ್‌ನ ನಗರಗಳಲ್ಲಿರುವ ಸಿರಿಯ ನಿರಾಶ್ರಿತರಿಗೆ ನೆರವನ್ನು ನಿರಂತರವಾಗಿ ವಿತರಿಸಲಾಗುತ್ತಿದೆ ಎಂದು ಲೆಬನಾನ್‌ನಲ್ಲಿರುವ ಸೌದಿ ರಾಷ್ಟ್ರೀಯ ಆಂದೋಲನ ಕಚೇರಿಯ ನಿರ್ದೇಶಕ ವಾಲಿದ್ ಜಲಾಲ್ ತಿಳಿಸಿದರು.
ಹಿಂಸಾಚಾರಕ್ಕೆ ಬೆದರಿ ಸಿರಿಯ ತೊರೆದ ನಿರಾಶ್ರಿತರಿಗೆ ಹೊಸ ಪ್ರದೇಶಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಗುವಂತೆ ಈ ನೆರವು ನೀಡಲಾಗುತ್ತಿದೆ.
ಸೌದಿ ಅರೇಬಿಯದ ದೊರೆ ಸಲ್ಮಾನ್‌ರ ಸೂಚನೆಯಂತೆ ಈ ನೆರವು ಆಂದೋಲನವನ್ನು ನಡೆಸಿಕೊಂಡು ಬರಲಾಗುತ್ತಿದೆ ಯೋಜನೆಯ ಅಧಿಕಾರಿ ಬದ್ರ್ ಬಿನ್ ಅಬ್ದುಲ್ ರಹಮಾನ್ ಅಲ್-ಸಮ್ಹಾನ್ ತಿಳಿಸಿದರು.







