ನೋಟು ರದ್ದತಿ 2016ರ ಬೃಹತ್ ಹಗರಣ: ಚಿದಂಬರಂ

ಮುಂಬೈ, ಫೆ.12: ನೋಟು ರದ್ದತಿ ಕ್ರಮವು 2016ರ ಬೃಹತ್ ಹಗರಣ ಎಂದು ಬಣ್ಣಿಸಿರುವ ಮಾಜಿ ವಿತ್ತ ಸಚಿವ ಪಿ.ಚಿದಂಬರಂ, 2016-17ರಲ್ಲಿ ದೇಶದ ಅಭಿವೃದ್ಧಿ ದರವು ಶೇ.6ರಿಂದ 6.5ರಷ್ಟಿದ್ದು ಇದು ಸಿಎಸ್‌ಒ(ಕೇಂದ್ರೀಯ ಅಂಕಿಅಂಶಗಳ ಸಂಸ್ಥೆ) ಮತ್ತು ಆರ್‌ಬಿಐಯ ನಿರೀಕ್ಷೆಗಿಂತ ಸಾಕಷ್ಟು ಕಡಿಮೆಯಾಗಿದೆ ಎಂದಿದ್ದಾರೆ.
ಈ ಹಿಂದಿನ ಅಂದಾಜಿಗಿಂತ ಶೇ.1ರಷ್ಟು ಕಡಿಮೆ ಪ್ರಮಾಣದ ಅಭಿವೃದ್ಧಿ ದರವನ್ನು ನಾವು ನಿರೀಕ್ಷಿಸಬಹುದು ಎಂದು ಹೇಳಲು ನನಗೆ ಬೇಸರವಾಗುತ್ತಿದೆ. ಇದರಿಂದ ಜಿಡಿಪಿಗೆ (ಒಟ್ಟಾರೆ ಅಭಿವೃದ್ಧಿ ಸೂಚ್ಯಾಂಕ) ಸುಮಾರು 1.5 ಲಕ್ಷ ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ಚಿದಂಬರಂ ನುಡಿದರು. ಬೃಹತ್ ಮುಂಬಯಿ ನಗರಪಾಲಿಕೆ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಕೆಲವರು ಹೀಗೊಂದು ಯೋಜನೆಯನ್ನು ಅವರ ತಲೆಯಲ್ಲಿ ಬಿತ್ತಿದರು. ಸೀದಾ ಟಿವಿ ಮುಂದೆ ಹೋದ ಅವರು ನೋಟು ಅಮಾನ್ಯಗೊಳಿಸಲಾಗಿದೆ ಎಂದು ಘೋಷಿಸಿಯೇ ಬಿಟ್ಟರು. ಇದರಿಂದ ಆದ ಆಘಾತ 1.5 ಲಕ್ಷ ಕೋಟಿ ನಷ್ಟ ಎಂದು ಅವರು ಪ್ರಧಾನಿ ಮೋದಿಯ ಹೆಸರೆತ್ತದೆ ಟೀಕಿಸಿದರು. 2017-18ರಲ್ಲಿ ಕೂಡಾ ಅಭಿವೃದ್ಧಿ ದರ ಇಷ್ಟೇ ಇರಲಿದೆ (ಶೇ.6ರಿಂದ ಶೇ.6.5ರಷ್ಟು) ಎಂದವರು ತಿಳಿಸಿದರು.
ನೋಟು ಅಮಾನ್ಯೀಕರಣ ಎಂಬ ಮೂರ್ಖ ನಿರ್ಧಾರದ ಬಗ್ಗೆ ಇಂದಲ್ಲ ನಾಳೆ ಕೇಂದ್ರ ಸರಕಾರಕ್ಕೆ ಜ್ಞಾನೋದಯವಾಗಲಿದೆ . ಮೊದಲು ನೋಟು ಅಮಾನ್ಯಗೊಳಿಸಲಾಗಿದೆ ಎಂದರು. ಆ ಮೇಲೆ ಮರುಚಲಾವಣೆ ಎಂದರು . ಈ ತಮಾಷೆಯೆಲ್ಲ ಯಾಕೆ ಎಂದವರು ಪ್ರಶ್ನಿಸಿದರು. ರಾತ್ರೋರಾತ್ರಿ 15.44 ಲಕ್ಷ ಕೋಟಿ ಮೊತ್ತದ ಹಣವನ್ನು ಚಲಾವಣೆಯಿಂದ ಹಿಂಪಡೆಯಲಾಯಿತು. ಇದೀಗ ಈ ಮೊತ್ತದ ಹಣವನ್ನು ಮರಳಿ ಚಲಾವಣೆಗೆ ತರಲು ನೋಟುಗಳನ್ನು ಮುದ್ರಿಸಲಾಗುತ್ತಿದೆ. ಈ ನೋಟು ರದ್ದತಿ ಹಗರಣ 2016ರ ಅತೀ ದೊಡ್ಡ ಹಗರಣ ಎಂದು ವಿಶ್ಲೇಷಿಸಿದರು.
ಹಳೆಯ ನೋಟುಗಳನ್ನು ಹಿಂಪಡೆದು, ಹೊಸ ನೋಟುಗಳನ್ನು ಚಲಾವಣೆಗೆ ತಂದೊಡನೆ ಕಾಳಧನ ಅಥವಾ ಭ್ರಷ್ಟಾಚಾರಕ್ಕೆ ತಡೆ ಒಡ್ಡಿದಂತಾಗುವುದಿಲ್ಲ ಎಂದ ಚಿದಂಬರಂ, ಈಗ ಚಲಾವಣೆಯಲ್ಲಿರುವ ನೋಟುಗಳ ಒಟ್ಟು ಮೌಲ್ಯ 9.5 ಲಕ್ಷ ಕೋಟಿಯಾಗಿದ್ದು , ಪೂರ್ತಿ ಮೊತ್ತದ ಹಣ ಚಲಾವಣೆಗೆ ಬರಲು ಜೂನ್ ತಿಂಗಳವರೆಗೆ ಕಾಯಬೇಕು ಎಂದು ಅಭಿಪ್ರಾಯಪಟ್ಟರು.







