ನಭಾ ಜೈಲ್‌ಬ್ರೇಕ್ ಪ್ರಕರಣದ ರೂವಾರಿ ಸೇರಿದಂತೆ ನಾಲ್ವರ ಸೆರೆ

ಚಂಡೀಗಢ, ಫೆ.12: ಕಳೆದ ವರ್ಷ ನಡೆದ ನಭಾ ಜೈಲ್‌ಬ್ರೇಕ್ ಪ್ರಕರಣದ ರೂವಾರಿ ಸೇರಿದಂತೆ ನಾಲ್ವರು ಕುಖ್ಯಾತ ಪಾತಕಿಗಳನ್ನು ಬಂಧಿಸಲಾಗಿದೆ.
ಪಂಜಾಬಿನ ಮೋಗಾ ಜಿಲ್ಲೆಯ ಧುಡಿಕೆ ಗ್ರಾಮದ ಮನೆಯೊಂದರಲ್ಲಿ ಅವಿತಿದ್ದ ಈ ದುಷ್ಕರ್ಮಿಗಳನ್ನು ಬಂಧಿಸಲಾಯಿತು. ನಭಾ ಜೈಲಿನಿಂದ ತಪ್ಪಿಸಿಕೊಂಡಿದ್ದ ಕುಖ್ಯಾತ ಪಾತಕಿ ಗುರ್‌ಪ್ರೀತ್ ಸಿಂಗ್ ಸೆಖಾನ್, ಈತನ ಸೋದರ ಸಂಬಂಧಿ ಮನ್‌ವೀರ್‌ಸಿಂಗ್ ಸೆಖಾನ್, ರವೀಂದರ್ ಸಿಂಗ್ ಮತ್ತು ಕುಲ್‌ವೀಂದರ್ ಸಿಂಗ್ ಬಂಧಿತರು ಎಂದು ಪಂಜಾಬ್ ಪೊಲೀಸ್ ಹೆಚ್ಚುವರಿ ಪ್ರಧಾನ ನಿರ್ದೇಶಕ ಗುರ್ಮೀತ್ ಸಿಂಗ್ ಚೌಹಾನ್ ತಿಳಿಸಿದ್ದಾರೆ.
ಗುರ್‌ಪ್ರೀತ್ ಬಂಧನದೊಂದಿಗೆ ನಭಾ ಜೈಲಿನಿಂದ ತಪ್ಪಿಸಿಕೊಂಡ ಆರು ದುಷ್ಕರ್ಮಿಗಳ ಪೈಕಿ ಮೂವರನ್ನು ಬಂಧಿಸಿದಂತಾಗಿದೆ. ಈ ಮೊದಲು ಖಲಿಸ್ತಾನ್ ಲಿಬರೇಷನ್ ಫ್ರಂಟ್ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟೂ ಮತ್ತು ನೀತ ದಿಯೋಲ್‌ರನ್ನು ಬಂಧಿಸಲಾಗಿತ್ತು. ಗುರ್‌ಪ್ರೀತ್ ಜೈಲು ಬ್ರೇಕ್ ಪ್ರಕರಣದ ರೂವಾರಿ ಎನ್ನಲಾಗಿದ್ದು ಈತನ ವಿರುದ್ಧ ಕೊಲೆ, ಅಪಹರಣ, ಸುಲಿಗೆ ಸೇರಿದಂತೆ ಹಲವಾರು ಪ್ರಕರಣಗಳು ದಾಖಲಾಗಿವೆ.





