ಗ್ರೀಸ್: 2ನೆ ಮಹಾಯುದ್ಧ ಕಾಲದ ಬಾಂಬ್ ಪತ್ತೆ
ನಿಷ್ಕ್ರಿಯಗೊಳಿಸುವ ಮೊದಲು 70,000 ಜನರ ಸ್ಥಳಾಂತರ

ತೆಸಲೋನಿಕಿ (ಗ್ರೀಸ್), ಫೆ. 12: ಎರಡನೆ ಮಹಾಯುದ್ಧ ಕಾಲದ ಬಾಂಬೊಂದನ್ನು ನಿಷ್ಕ್ರಿಯಗೊಳಿಸಲು ಗ್ರೀಸ್‌ನ ತೆಸಲೋನಿಕಿ ನಗರದ ಸುಮಾರು 70,000 ಜನರನ್ನು ಸ್ಥಳಾಂತರಗೊಳಿಸುವ ಕೆಲಸವನ್ನು ಅಧಿಕಾರಿಗಳು ಶನಿವಾರ ಆರಂಭಿಸಿದ್ದಾರೆ.
ಸುಮಾರು 250 ಕಿಲೋಗ್ರಾಂ ತೂಕದ ಬಾಂಬ್ ಕಳೆದ ವಾರ ರಸ್ತೆ ಕಾಮಗಾರಿ ನಡೆಯುತ್ತಿದ್ದಾಗ ಪತ್ತೆಯಾಗಿತ್ತು.
300ಕ್ಕೂ ಅಧಿಕ ವಿಕಲಚೇತನರು ಮತ್ತು ಹಾಸಿಗೆ ಹಿಡಿದಿರುವ ರೋಗಿಗಳನ್ನು ಶನಿವಾರ 20 ಆ್ಯಂಬುಲೆನ್ಸ್‌ಗಳ ಮೂಲಕ ಸ್ಥಳಾಂತರಿಸಲಾಯಿತು ಎಂದು ನಗರದ ಅಧಿಕಾರಿಗಳು ತಿಳಿಸಿದರು.
ಬಾಂಬ್‌ನ 1.9 ಕಿಲೋಮೀಟರ್ ತ್ರಿಜ್ಯದಲ್ಲಿ ವಾಸಿಸುವ ಎಲ್ಲ ನಿವಾಸಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವ ಕಾರ್ಯ ರವಿವಾರದ ವೇಳೆಗೆ ಪೂರ್ಣಗೊಳ್ಳಲಿದೆ.
ಗ್ರೀಸ್‌ನಲ್ಲಿ ಈ ತರಹದ ಕಾರ್ಯಾಚರಣೆ ಹಿಂದೆಂದೂ ನಡೆದಿಲ್ಲ. ಇಷ್ಟು ಜನಭರಿತ ನಗರವೊಂದರಲ್ಲಿ ಹಿಂದೆಂದೂ ಈ ಗಾತ್ರದ ಬಾಂಬ್ ಪತ್ತೆಯಾಗಿಲ್ಲ.
ಯಾವ ದೇಶ ಈ ಬಾಂಬ್ ಹಾಕಿದೆ ಹಾಗೂ ಅದು ಯಾವಾಗ ಬಿದ್ದಿದೆ ಎಂಬುದು ತಿಳಿದಿಲ್ಲ ಎಂದು ಸೇನಾಧಿಕಾರಿಯೊಬ್ಬರು ಹೇಳಿದರು.
ಒಂದು ಸಾವಿರ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಹಾಗೂ ಜನರಿಗೆ ಹಲವಾರು ದಿನಗಳಿಂದ ಮಾಧ್ಯಮ, ಕರಪತ್ರಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಎಚ್ಚರಿಕೆಗಳನ್ನು ನೀಡಲಾಗುತ್ತಿದೆ.







