ಅಫ್ಘಾನ್: ಆತ್ಮಹತ್ಯಾ ಬಾಂಬ್ ದಾಳಿ; 6 ಸೈನಿಕರ ಸಾವು

ಕಂದಹಾರ್, ಫೆ. 12: ತಾಲಿಬಾನ್ ಆತ್ಮಹತ್ಯಾ ಬಾಂಬರೊಬ್ಬ ಸ್ಫೋಟಕಗಳಿಂದ ತುಂಬಿದ್ದ ಕಾರನ್ನು ಶನಿವಾರ ಅಫ್ಘಾನ್ ಸೈನಿಕರ ಮೇಲೆ ಹರಿಸಿದಾಗ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಸೈನಿಕರು ತಮ್ಮ ಸಂಬಳ ಪಡೆಯುವುದಕ್ಕಾಗಿ ಹೆಲ್ಮಂಡ್ ಪ್ರಾಂತದ ಬ್ಯಾಂಕೊಂದರ ಹೊರಗೆ ಸರತಿ ಸಾಲಿನಲ್ಲಿ ನಿಂತಿದ್ದಾಗ ದಾಳಿ ನಡೆದಿದೆ.
ಹೆಲ್ಮಂಡ್ ಪ್ರಾಂತದ ರಾಜಧಾನಿ ಲಶ್ಕರ್ ಗಾಹ್‌ನಲ್ಲಿ ನಡೆದ ಸ್ಫೋಟದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು ಎರಡು ಡಝನ್ ಮಂದಿ ಗಾಯಗೊಂಡಿದ್ದಾರೆ. ಅವರ ಪೈಕಿ ಹೆಚ್ಚಿನವರ ಸ್ಥಿತಿ ಚಿಂತಾಜನಕವಾಗಿದೆ.
ಪ್ರಾಂತದ ಹೆಚ್ಚಿನ ಭಾಗಗಳ ಮೇಲೆ ನಿಯಂತ್ರಣ ಹೊಂದಿರುವ ತಾಲಿಬಾನ್ ದಾಳಿಯ ಹೊಣೆ ಹೊತ್ತಿದೆ. ಇತ್ತೀಚೆಗೆ ಸಂಗಿನ್ ಜಿಲ್ಲೆಯ ಮೇಲೆ ಅಮೆರಿಕದ ಪಡೆಗಳು ನಡೆಸಿದ ವಾಯು ದಾಳಿಗೆ ಪ್ರತಿಯಾಗಿ ಇದನ್ನು ನಡೆಸಲಾಗಿದೆ ಎಂದು ಅದು ಹೇಳಿಕೊಂಡಿದೆ.
ಆದರೆ, ತಾನು ನಡೆಸಿದ ದಾಳಿಯಲ್ಲಿ ನಾಗರಿಕರು ಹತರಾಗಿಲ್ಲ ಎಂದು ತನ್ನ ವೆಬ್‌ಸೈಟ್‌ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ಅದು ಹೇಳಿಕೊಂಡಿದೆ.
Next Story





