ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ ಸಮಾರೋಪ

ಮಂಗಳೂರು, ಫೆ. 12: ನಗರದ ನೆಹರೂ ಮೈದಾನದಲ್ಲಿ ಎರಡು ದಿನಗಳ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದ ಇಂದು ಸಮಾರೋಪಗೊಂಡಿತು.
ಗುಜರಾತ್‌ನ ರಾಜಕೋಟ್‌ನ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಸರ್ವಸ್ಥಾನಂದಜೀ ಸಮಾರೋಪ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿವೇಕಾನಂದರ ಚಿಂತನೆಗಳ ಹೊರತಾದ ಭಾರತವನ್ನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಆಧುನಿಕ ತಂತ್ರಜ್ಞಾನಗಳ ಮೂಲಕ ವಿವೇಕಾನಂದ- ನಿವೇದಿತಾರ ಚಿಂತನೆಗಳನ್ನು ಪ್ರಚುರಪಡಿಸಬೇಕು. ಇಂತಹ ಸಾಹಿತ್ಯ ಸಮ್ಮೇಳನಗಳನ್ನು ದೇಶದೆಲ್ಲೆಡೆಯೂ ಆಯೋಜಿಸುವಂತಾಗಬೇಕು ಎಂದರು.
ಹಿರೇಹಡಗಲಿ ಶ್ರೀ ಹಾಲೇಶ್ವರ ಸಂಸ್ಥಾನ ಮಠದ ಶ್ರೀ ಅಭಿನವ ಹಾಲಶ್ರೀ ಮಾತನಾಡಿ,ಸ್ವಾಮಿ ವಿವೇಕಾನಂದ ಮತ್ತು ಅಕ್ಕ ನಿವೇದಿತಾ ಸಾಹಿತ್ಯಗಳು ಶ್ರೇಷ್ಠವಾಗಿದ್ದು, ಸಮಾಜಕ್ಕೆ ಮಾರ್ಗದರ್ಶಿಯಾಗಿವೆ ಎಂದರು.
ವಿವೇಕಾನಂದ ಕೊಲಾಜ್ ವಿಶ್ವ ದಾಖಲೆಗೆ!
ಮುಲ್ಕಿ ಪಂಜಿನಡ್ಕ ಕೆಪಿಎಸ್‌ಕೆ ಪ್ರೌಢಶಾಲಾ ಕಲಾ ಶಿಕ್ಷಕ ವೆಂಕಿ ಪಲಿಮಾರ್ ಮತ್ತು ವಿದ್ಯಾರ್ಥಿಗಳು ನಿರ್ಮಿಸಿದ 21ಅಡಿ ಎತ್ತ ಮತ್ತು 16 ಅಗಲದ ವಿವೇಕಾನಂದರ ಕೊಲಾಜ್ ಚಿತ್ರ ಹಾಗೂ ಕೇವಲ 10 ನಿಮಿಷಗಳಲ್ಲಿ 108 ಸೂರ್ಯ ನಮಸ್ಕಾರ ಮಾಡಿದ ಯುವ ಬ್ರಿಗೇಡ್ ಕಾರ್ಯಕರ್ತ ನಿರಂಜನ್ ಶೆಟ್ಟಿ ಸಾಧನೆ ವಿಶ್ವ ದಾಖಲೆಗೆ ಸೇರ್ಪಡೆಯಾಗಿರುವುದಾಗಿ ಚಕ್ರವರ್ತಿ ಸೂಲಿಬೆಲೆ ಪ್ರಕಟಿಸಿದರು.
ಸಮಾರೋಪ ವೇದಿಕೆಯಲ್ಲಿ ವೆಂಕಿಪಲಿಮಾರ್ ಹಾಗೂ ಸಮ್ಮೇಳನದಲ್ಲಿ ಕೆಲವೇ ನಿಮಿಷಗಳಲ್ಲಿ ವಿವೇಕಾನಂದರ ಚಿತ್ರ ರಚಿಸಿರುವ ಹಾಗೂ ಪಣಂಬೂರು ಕಡಲ ಕಿನಾರೆಯಲ್ಲಿ ಮರಳಿನಲ್ಲಿ ವಿವೇಕಾನಂದ ಮತುತಿ ಸೋದರಿ ನಿವೇದಿತಾರ ಚಿತ್ರ ರಚಿಸಿದ ಕಲಾವಿದ ಮಹೇಂದ್ರ ಅವರನ್ನು ಗೌರವಿಸಲಾಯಿತು.







