ಶಾಂತ ರೀತಿಯಲ್ಲಿ ನೀರಸ ಮತದಾನ
ಗ್ರಾಮ ಪಂಚಾಯತ್ ಚುನಾವಣೆ

ಮೂಡಿಗೆರೆ, ಫೆ.12: ಗೋಣಿಬೀಡು, ತರುವೆ ಮತ್ತು ಬಣಕಲ್ ಗ್ರಾಪಂ ಕ್ಷೇತ್ರಗಳ ಮತದಾನವು ಶಾಂತ ರೀತಿಯಿಂದ ನಿರಸವಾಗಿ ನಡೆದಿದ್ದು,ಯಾವುದೇ ಅಹಿತರ ಘಟನೆ ನಡೆಯದೆ ಪ್ರಶಾಂತತೆಯಿಂದ ಸಾರ್ವಜನಿಕರು ಮತದಾನ ಮಾಡಿದರು.
ತರುವೆ ಗ್ರಾಪಂ ವ್ಯಾಪ್ತಿಯ ಕ್ಷೇತ್ರದಲ್ಲಿ ಕೊಟ್ಟಿಗೆಹಾರದ ಅತ್ತಿಗೆರೆ ಸ.ಹಿ.ಪ್ರಾ.ಶಾಲೆಯಲ್ಲಿ ಬೆಳಗ್ಗೆ 7ಗಂಟೆಯಿಂದ ಮತದಾನ ಆರಂಭವಾಯಿತು.ಮತದಾರರು ಯಾವುದೇ ಸಮಸ್ಯೆ ಎದುರಾಗದೇ ಶಾಂತ ರೀತಿಯಿಂದ ಮತದಾನ ಮಾಡಿ ತಮ್ಮ ಪಂಚಾಯತ್ ಚುಕ್ಕಾಣಿಗಾಗಿ ಅಭಿವೃದ್ಧಿಯ ಹಿನ್ನಲೆಯಲ್ಲಿ ಸ್ವತಂತ್ರವಾಗಿ ಮತದಾನ ಮಾಡಿದರು. ತರುವೆ ಕ್ಷೇತ್ರದಲ್ಲಿ ಶೇ.79.29ರಷ್ಟು ಮತದಾನವಾಗಿದೆ.
ಬಣಕಲ್,ಕೂಡಹಳ್ಳಿ, ಹೆಗ್ಗುಡ್ಲು ಕ್ಷೇತ್ರದಲ್ಲೂ ಕೂಡ ಗ್ರಾಪಂ ಚುನಾವಣೆ ಸರಕಾರಿ ಶಾಲೆಯಲ್ಲಿ ಶಾಂತ ರೀತಿಯಿಂದ ನಡೆಯಿತು.ಪೊಲೀಸ್ ಸಿಬ್ಬಂದಿ ಹಾಗೂ ಚುನಾವಣಾ ಅಧಿಕಾರಿಗಳು ಮತದಾನ ಯಶಸ್ವಿಯಾಗಲು ಸಹಕರಿಸಿದರು. ಬಣಕಲ್ ಗ್ರಾಮಸ್ಥರು ಕನಿಷ್ಠ ಶೇ.67.97ರಷ್ಟು ಮತದಾನ ಮಾಡಿದರು.ಸಂಜೆ 5 ಗಂಟೆಗೆ ಎಲ್ಲಾ ಕ್ಷೇತ್ರಗಳಲ್ಲೂ ಮತದಾನವು ಸಮಾಪ್ತಿ ಮಾಡಲಾಯಿತು.
ತರುವೆ ಗ್ರಾಪಂ ವ್ಯಾಪ್ತಿಯಲ್ಲಿ ಚಿಕ್ಕಪುಟ್ಟ ಮಾತಿನ ಚಕಮಕಿಯಿಂದ ಸ್ವಲ್ಪಹೊತ್ತು ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಬಾಳೂರು ಮೂಡಿಗೆರೆ ಮತ್ತು ಬಣಕಲ್ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಶಾಂತಗೊಳಿಸಿದರು. ತರುವೆ ಚುನಾವಣಾ ಕಾರ್ಯದಲ್ಲಿ ಚುನಾವಣಾಧಿಕಾರಿಗಳಾದ ತೇಜೋಮೂರ್ತಿ,ಆಲೇಗೌಡ, ಪುಟ್ಟಪ್ಪ, ಶಿಕ್ಷಕ ಮಧುಸೂದನ್, ಅಣ್ಣಪ್ಪ ಮತ್ತಿತರರಿದ್ದರು.
ಜಿ.ಹೊಸಳ್ಳಿ, ಹಿರೇಶಿಗರದಲ್ಲಿ ಶೇ.74.56ರಷ್ಟು ಮತದಾನಗೋಣಿಬೀಡು ಗ್ರಾಪಂ ವ್ಯಾಪ್ತಿಯ ಜಿ.ಹೊಸಳ್ಳಿ ಹಾಗೂ ಹಿರೇಶಿಗರದ ಒಟ್ಟು5 ಸ್ಥಾನಗಳಿಗೆ ಚುನಾವಣೆ ಮತದಾನ ಪ್ರಕ್ರಿಯೆ ರವಿವಾರ ಎರಡು ಮತಗಟ್ಟೆಗಳಲ್ಲಿ ನಡೆದಿದ್ದು ಶೇ.74.56 ಮತದಾನ ದಾಖಲಾಗಿದೆ. ತಲಾ ನಾಲ್ಕು ಸಿಬ್ಬಂದಿ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸಿದರು. ಚುನಾವಣೆ ಘೋಷಣೆಯಾಗಿದ್ದ ಐದು ಸ್ಥಾನಗಳಿಗೆ ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದು ಯಾವ ಅಭ್ಯರ್ಥಿಗೆ ಅದೃಷ್ಟ ಒಲಿದಿದೆ ಎಂಬುದು ಮತಪೆಟ್ಟಿಗೆಯಲ್ಲಿ ಅಡಕವಾಗಿದೆ. ಫೆ.15ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ಪ್ರತ್ಯೇಕ ಗ್ರಾಪಂ ಸ್ಥಾಪನೆಗೆ ಒತ್ತಾಯಿಸಿ ಕಳೆದ 2 ವರ್ಷಗಳಿಂದ ಗ್ರಾಪಂ ಚುನಾವಣೆ ಬಹಿಷ್ಕರಿಸಿ ಪ್ರತಿಭಟಿಸಿದ್ದ ಗೋಣಿಬೀಡು ಗ್ರಾಪಂ ವ್ಯಾಪ್ತಿಯ ಜಿ.ಹೊಸಳ್ಳಿ ಹಾಗೂ ಹಿರೇಶಿಗರ ಕ್ಷೇತ್ರಗಳ ಮತದಾರರು ಈ ಬಾರಿ ಚುನಾವಣೆಗೆ ಸಮ್ಮತಿ ಸೂಚಿಸಿ ಮತದಾನ ಹೆಚ್ಚಿನ ಸಂಖ್ಯೆಯಲ್ಲಿ ಮಾಡಿದ್ದಾರೆ. ತಾಲೂಕಿನ ಬಣಕಲ್ ಶೇ.67.97 ಹಾಗೂ ತರುವೆ 79.29ರಷ್ಟು ಮತದಾನ ದಾಖಲಾಗಿದೆ.







