ಉದ್ಯೋಗ, ಉದ್ಯಮ, ಉತ್ಪನ್ನ ಸೇವಾ ಚಟುವಟಿಕೆಗಳಿಂದ ಲಾಭ ಸಾಧ್ಯ: ರಿಯಾಝ್ ಅಹ್ಮದ್

ಚಿಕ್ಕಮಗಳೂರು, ಫೆ.12: ಜನ ನಾವೀನ್ಯತೆ ಬಯಸುತ್ತಾರೆ. ಕಾಲಕಾಲಕ್ಕೆ ತಂತ್ರಜ್ಞಾನ ಬಳಸಿಕೊಂಡು ಬದಲಾಗುವ ಉದ್ಯೋಗ-ಉದ್ಯಮ-ಉತ್ಪನ್ನ-ಸೇವೆ ಚಟುವಟಿಕೆಗಳಿಂದ ಮಾತ್ರ ಉಳಿಯಲು-ಲಾಭಗಳಿಸಲು ಸಾಧ್ಯ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ರಿಯಾಝ್ ಅಹ್ಮದ್ ಹೇಳಿದರು.
ಬಿಎಸ್ಪಿ ನೇತೃತ್ವದಲ್ಲಿ ನಗರದ ಚಿಕ್ಕೊಳಲೆ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಹೋದರತ್ವ ಸಭೆಯಲ್ಲಿ ಮಾತನಾಡಿದರು.ಕಚ್ಛಾವಸ್ತುಗಳ ಲಭ್ಯತೆ ಅಥವಾ ಮಾರುಕಟ್ಟೆ ಸ್ಥಳೀಯವಾಗಿದ್ದಾಗ ಉದ್ಯಮ ಲಾಭದಾಯಕವಾಗುತ್ತದೆ.ಉಚಿತವಾಗಿ ಸಿಕ್ಕ ಸ್ವರ್ಗವೂ ಸ್ವೀಕಾರಾರ್ಹವಲ್ಲ. ಕಷ್ಟಪಟ್ಟು ಬೆರು ಸುರಿಸುವುದರಲ್ಲಿ ಸ್ವರ್ಗ ಸುಖವಿದೆ. ಪ್ರತಿಕೆಲಸಕ್ಕೂ ಅದರದೇ ಆದ ಗೌರವ, ಘನತೆ ಇದೆ. ಮಾಡುವ ಕೆಲಸವನ್ನು ಶ್ರದ್ಧೆ,ದಕ್ಷತೆ,ಪ್ರೀತಿಯಿಂದ ಪ್ರಾಮಾಣಿಕವಾಗಿ ಮಾಡಿದಾಗ ಯಶಸ್ಸು ನಮ್ಮದಾಗುತ್ತದೆ ಎಂದ ರಿಯಾಝ್,ಕೆಲಸಕ್ಕೆ ವಯಸ್ಸಿನ ನಿರ್ಬಂಧಕ್ಕಿಂತ ಮನಸ್ಸು ಮುಖ್ಯ ಎಂದು ತಿಳಿಸಿದರು.
ಸಾಲ ಸೌಲಭ್ಯಕ್ಕೆ ಇಂದು ಕೊರತೆ ಇಲ್ಲ.ಆದರೆ ಸಾಲ ಪಡೆಯುವ ಯೋಗ್ಯತೆಯನ್ನು ನಾವು ಗಳಿಸಿಕೊಂಡರೆ ಮಾತ್ರ ಸಾಲ ಕೇಳಬಹುದು. ಸರಕಾರದ ವಿವಿಧ ಇಲಾಖೆಗಳು, ನಿಗಮ, ಮಂಡಳಿ, ಯೋಜನೆಗಳು ನೂರಾರು ಇವೆ. ಅವುಗಳ ಅರಿವು, ನೀತಿ, ನಿಯಮ, ಮಾನದಂಡಗಳನ್ನು ಅರಿತರೆ ಪ್ರಯೋಜನ ಪಡೆಯಬಹುದು.ಇಂದು ಗಲ್ಲಿ ಗಲ್ಲಿಗಳಲ್ಲಿ ಬ್ಯಾಂಕ್ ಶಾಖೆಗಳಿದ್ದು,ಸಾಲಕೊಡುವ ಬಗ್ಗೆ ಜಾಹೀರಾತು ನೀಡಿ ಕರೆಯುತ್ತಿದ್ದಾರೆ.
ಬ್ಯಾಂಕ್‌ಗಳು ಇರುವುದೇ ಸಾಲ ನೀಡಿ ಸಕಾಲದಲ್ಲಿ ಕಂತು ಕಟ್ಟಿಸಿಕೊಳ್ಳಲು ಎಂದರು.
ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಹೊಸ ವಿಚಾರಗಳನ್ನು ಅರಿಯುವ ತುಡಿತ ನಮ್ಮಲ್ಲಿರಬೇಕು.ಮಾನವಜನ್ಮ ಪವಿತ್ರ,ಮಾನವಜೀವಿ ಮಾತ್ರ ಾತನಾಡಬಲ್ಲ, ಆಲೋಚಿಸಬಲ್ಲ. ಪರಸ್ಪರ ಪ್ರೀತಿವಿಶ್ವಾಸದಿಂದ ಸತ್ಪ್ರಜೆಗಳಾಗಿ ಮಾನವೀಯತೆಯನ್ನು ಮೈಗೂಡಿಸಿಕೊಂಡು ಬದುಕುವುದು ಅಗತ್ಯ.
ಸಮಾಜದ ಒಳಿತನ್ನು ಪ್ರೋತ್ಸಾಹಿಸುವ ಕೆಡುಕನ್ನು ವಿರೋಧಿಸುವ ಗುಣ ಹೊಂದಬೇಕು.ಸಮಾಜದ ಆಗುಹೋಗುಗಳಿಗೆ ಕಾಲ ಕಾಲಕ್ಕೆ ಪ್ರತಿಕ್ರಿಯಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು.ಕೇವಲ ಹತ್ತುಜನ ಕಲಿಗಳು ಪ್ರತಿಕ್ರಿಯಿಸುವುದರಿಂದ ಸಮಾಜದಲ್ಲಿ ಪರಿವರ್ತನೆ ಕಾಣಬಹುದು ಎಂದು ನುಡಿದರು.







