ಶಾಸಕರ ಅಕ್ರಮ ಬಂಧನದ ಸುದ್ದಿ ಸುಳ್ಳು: ಶಶಿಕಲಾ

ಚೆನ್ನೈ,ಫೆ.12: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರು ಇಲ್ಲಿಗೆ ಸಮೀಪದ ರೆಸಾರ್ಟ್‌ವೊಂದರಲ್ಲಿ ಪಕ್ಷದ ಶಾಸಕರನ್ನು ಅಕ್ರಮ ಬಂಧನದಲ್ಲಿರಿಸಲಾಗಿದೆ ಎಂಬ ‘ಬಂಡುಕೋರರು ಮತ್ತು ಶತ್ರುಗಳು ’ ಹರಡುತ್ತಿರುವ ವರದಿಗಳನ್ನು ರವಿವಾರ ಸಾರಾಸಗಟಾಗಿ ತಿರಸ್ಕರಿಸಿದರು. ಇವೆಲ್ಲ ಅಪ್ಪಟ ಸುಳ್ಳು ಎಂದು ಒತ್ತಿ ಹೇಳಿದ ಅವರು ಶಾಸಕರನ್ನು ಸುದ್ದಿಗಾರರ ಎದುರು ಹಾಜರುಪಡಿಸಿದರು.
ಶಾಸಕರು ಸಂಪೂರ್ಣ ಸ್ವತಂತ್ರರಾಗಿದ್ದಾರೆ ಮತ್ತು ಪಕ್ಷ ಹಾಗೂ ಸರಕಾರಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು ದೃಢ ನಿರ್ಧಾರವನ್ನು ಮಾಡಿದ್ದಾರೆ ಎಂದರು.
ಶಾಸಕರು ಉಳಿದುಕೊಂಡಿರುವ ರೆಸಾರ್ಟ್‌ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ವಾರ ಹೊರಬೀಳಲಿದೆ ಎಂದು ನಿರೀಕ್ಷಿಸಲಾಗಿರುವ ಅಕ್ರಮ ಸಂಪತ್ತು ಪ್ರಕರಣದ ತೀರ್ಪಿನ ಕುರಿತು ಪ್ರಶ್ನೆಗೆ ಕಾದು ನೋಡುವ ನೀತಿಯನ್ನು ಅನುಸರಿಸಿದರು. ಅದು ಬರಲಿ..ಏನೆಂದು ನೋಡೋಣ. ಈಗಲೇ ಯಾಕೆ ನಿರ್ಧಾರಕ್ಕೆ ಬರುತ್ತಿದ್ದೀರಾ ಎಂದು ಮರುಪ್ರಶ್ನೆ ಎಸೆದರು.
ತನ್ನನ್ನು ಸುತ್ತುವರಿದಿದ್ದ ಕೆಲವು ಮಹಿಳಾ ಶಾಸಕರತ್ತ ಬೆಟ್ಟು ಮಾಡಿದ ಶಶಿಕಲಾ, ಮಕ್ಕಳನ್ನು ಅಪಹರಿಸಲಾಗುವುದು ಎಂಬ ಬೆದರಿಕೆ ಕರೆಗಳು ಅವರಿಗೆ ಬಂದಿವೆ. ಆದರೆ ಮಕ್ಕಳನ್ನು ನೋಡಿಕೊಳ್ಳುವಂತೆ ತಮ್ಮ ಬಂಧುಗಳನ್ನು ಕೋರಿಕೊಂಡಿರುವ ಅವರು ರೆಸಾರ್ಟ್ ವಾಸ್ತವ್ಯವನ್ನು ಮುಂದುವರಿಸಿದ್ದಾರೆ. ಇದು ಈ ಆಂದೋಲನಕ್ಕೆ ಅವರ ಬದ್ಧತೆಯನ್ನು ಸೂಚಿಸುತ್ತಿದೆ ಎಂದರು.
ಶಾಸಕರ ಮುಕ್ತ ಚಲನವಲನಗಳಿಗಾಗಲೀ ಅವರ ಅಭಿವ್ಯಕ್ತಿ ಸ್ವಾತಂತ್ರಕ್ಕಾಗಲೀ ಯಾವುದೇ ತಡೆಯನ್ನೊಡ್ಡಲಾಗಿಲ್ಲ. ಇದನ್ನು ನೀವೇ ಕಣ್ಣಾರೆ ಕಾಣುತ್ತಿದ್ದೀರಿ. ಅವರೆಲ್ಲ ದೂರವಾಣಿ ಮೂಲಕ ತಮ್ಮ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಶಶಿಕಲಾ ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯಪಾಲ ಸಿ.ವಿದ್ಯಾಸಾಗರ ರಾವ್ ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದಾರೆ ಎಂಬ ವರದಿಗಳ ಕುರಿತ ಸುದ್ದಿಗಾರರ ಪ್ರಶ್ನೆಗೆ, ರಾಜಭವನವು ಇದನ್ನು ನಿರಾಕರಿಸಿದೆ ಎಂದು ಅವರು ಉತ್ತರಿಸಿದರು.
ಇಂತಹ ವರದಿಗಳನ್ನು ಹರಡುವವರು ಯಾರೆಂದು ನಮಗೆ ಗೊತ್ತು. ಅವರು ನಮ್ಮಲ್ಲಿ ಗೊಂದಲವನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಶಾಸಕರಿಗೆ ಇದು ತುಂಬ ಚೆನ್ನಾಗಿ ಗೊತ್ತು ಎಂದರು.







