ಒಲಿಂಪಿಕ್ಸ್ ಪದಕ ಗೆಲ್ಲುವ ಕನಸು ಈಗಲೂ ಜೀವಂತ: ರಾಯ್

ಹೊಸದಿಲ್ಲಿ, ಫೆ.12: ‘‘ರಿಯೋ ಒಲಿಂಪಿಕ್ಸ್ ನನ್ನ ಪಾಲಿಗೆ ಕರಾಳವಾಗಿತ್ತು. ಅದೀಗ ಇತಿಹಾಸವಾಗಿದೆ. ಮುಂಬರುವ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಇನ್ನಷ್ಟು ಪದಕಗಳನ್ನು ಗೆದ್ದುಕೊಡಲು ಕಠಿಣ ಶ್ರಮಪಡುವೆ’’ ಎಂದು ಭಾರತದ ಶೂಟರ್ ಜಿತೂ ರಾಯ್ ಹೇಳಿದ್ದಾರೆ.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿಪದಕ ವಿಜೇತ ರಾಯ್ ಏಷ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಸಾಕಷ್ಟು ಪದಕಗಳನ್ನು ಜಯಿಸಿದ್ದರು.
‘‘ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ನನ್ನ ಕನಸು ಈಗಲೂ ಜೀವಂತವಾಗಿದೆ. ರಿಯೋ ಗೇಮ್ಸ್ ನನ್ನ ಮೊದಲ ಒಲಿಂಪಿಕ್ಸ್ ಆಗಿತ್ತು. ನನ್ನ ಮೇಲೆ ಸಾಕಷ್ಟು ಭರವಸೆಗಳಿದ್ದವು. ರಿಯೋಗೆ ಉತ್ತಮ ತಯಾರಿ ನಡೆಸಿದ್ದೆ. ಕ್ರೀಡಾ ಸಚಿವರು, ಎನ್‌ಆರ್‌ಎಐ ಹಾಗೂ ನನ್ನ ಸಹೋದ್ಯೋಗಿಗಳು ಹಾಗೂ ಸಾಯ್ ಕೇಂದ್ರ ಸಹಿತ ಎಲ್ಲರೂ ಪ್ರಯತ್ನಪಟ್ಟಿದ್ದರು. ಮುಂಬರುವ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಕನಸನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುವೆ’’ ಎಂದು ರಾಯ್ ಹೇಳಿದ್ದಾರೆ.
ಭಾರತ ಇದೇ ಮೊದಲ ಬಾರಿ ಫೆ.23ರಂದು ಐಎಸ್‌ಎಸ್‌ಎಫ್ ವಿಶ್ವಕಪ್‌ನ ಆತಿಥ್ಯವಹಿಸಿಕೊಳ್ಳಲಿದ್ದು, ಮೆಗಾ ಸ್ಪರ್ಧೆ ಭಾರತದಲ್ಲಿ ಶೂಟಿಂಗ್ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಈ ಟೂರ್ನಿಯು ಭಾರತಕ್ಕೆ ಅತ್ಯಂತ ಮುಖ್ಯವಾಗಿದೆ.





