ಗಂಭೀರ್, ಧವನ್ ಅರ್ಧಶತಕ, ಉತ್ತರ ವಲಯಕ್ಕೆ ಜಯ
ಸೈಯದ್ ಮುಷ್ತಾಕ್ ಅಲಿ ಅಂತರ್-ವಲಯ ಟ್ವೆಂಟಿ-20 ಟೂರ್ನಿ

ಮುಂಬೈ, ಫೆ.12: ಅರಂಭಿಕ ಬ್ಯಾಟ್ಸ್‌ಮನ್‌ಗಳಾದ ಶಿಖರ್ ಧವನ್ ಹಾಗೂ ಗೌತಮ್ ಗಂಭೀರ್ ಅರ್ಧಶತಕದ ಕೊಡುಗೆಯ ನೆರವಿನಿಂದ ಉತ್ತರ ವಲಯ ತಂಡ ದಕ್ಷಿಣ ವಲಯ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಟೂರ್ನಿಯಲ್ಲಿ 8 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿದೆ.
ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 174 ರನ್ ಚೇಸಿಂಗ್‌ಗೆ ತೊಡಗಿದ ಉತ್ತರ ವಲಯ ತಂಡಕ್ಕೆ ದಿಲ್ಲಿ ದಾಂಡಿಗರಾದ ಗಂಭೀರ್ ಹಾಗೂ ಧವನ್ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ನಡೆಸಿ ಆಧಾರವಾದರು.
ಧವನ್ 38 ಎಸೆತಗಳಲ್ಲಿ ಆರು ಬೌಂಡರಿ, 1 ಸಿಕ್ಸರ್‌ಗಳ ಸಹಿತ 50 ರನ್ ಗಳಿಸಿ ಔಟಾದಾಗ ಉತ್ತರ ವಲಯ ತಂಡದ ಗೆಲುವಿಗೆ 50 ಎಸೆತಗಳಲ್ಲಿ 71 ರನ್ ಅಗತ್ಯವಿತ್ತು. ಮೂರನೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ರಿಷಬ್ ಪಂತ್ ಕೇವಲ 19 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 33 ರನ್ ಗಳಿಸಿದ್ದರು.
12 ಬೌಂಡರಿ ಒಳಗೊಂಡ 81 ರನ್ ಗಳಿಸಿದ ಗಂಭೀರ್ 18ನೆ ಓವರ್‌ನಲ್ಲಿ ಎಸ್.ಅರವಿಂದ್‌ಗೆ ಔಟಾದಾಗ ಉತ್ತರ ವಲಯದ ಗೆಲುವಿಗೆ ಕೇವಲ 10 ರನ್ ಅಗತ್ಯವಿತ್ತು. ಆಗ ಕ್ರೀಸ್‌ಗೆ ಆಗಮಿಸಿದ ಹರ್ಭಜನ್ ಸಿಂಗ್ 8 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಸುರಕ್ಷಿತವಾಗಿ ಗೆಲುವಿನ ದಡ ಸೇರಿಸಿದರು.
ದಕ್ಷಿಣ ವಲಯದ ಪರ ಎಂ.ಅಶ್ವಿನ್ ಮಾತ್ರ ಯಶಸ್ವಿ ಬೌಲರ್ ಎನಿಸಿಕೊಂಡರು.
ಇದಕ್ಕೆ ಮೊದಲು ಟಾಸ್ ಜಯಿಸಿದ ಉತ್ತರ ವಲಯ ತಂಡ ದಕ್ಷಿಣ ವಲಯವನ್ನು ಬ್ಯಾಟಿಂಗ್‌ಗೆ ಇಳಿಸಿತು. ತನ್ಮಯ್ ಶ್ರೀವಾಸ್ತವ ಹಾಗೂ ಮಯಾಂಕ್ ಅಗರವಾಲ್ ಮಿಂಚಿನ ವೇಗದಲ್ಲಿ 51 ರನ್ ಜೊತೆಯಾಟ ನಡೆಸಿ ತಂಡಕ್ಕೆ ಉತ್ತಮ ಆರಂಭವನ್ನೇ ನೀಡಿದ್ದರು.
22 ಎಸೆತಗಳಲ್ಲಿ ಕ್ಷಿಪ್ರವಾಗಿ ಮೂರು ವಿಕೆಟ್‌ಗಳನ್ನು ಉರುಳಿಸಿದ ಉತ್ತರ ವಲಯದ ಬೌಲರ್‌ಗಳು ತಿರುಗೇಟು ನೀಡಿದ್ದರು. ಆದರೆ, 4ನೆ ವಿಕೆಟ್‌ಗೆ 36 ಎಸೆತಗಳಲ್ಲಿ 54 ರನ್ ಸೇರಿಸಿದ ಹನುಮಾನ್ ವಿಹಾರಿ-ರಿಕಿ ಬೂಯ್ ತಂಡವನ್ನು ಗೌರವಾರ್ಹ ಮೊತ್ತದತ್ತ ಮುನ್ನಡೆಸಿದರು. ಫಾರ್ಮ್‌ನಲ್ಲಿರುವ ಆಟಗಾರ ವಿಜಯ ಶಂಕರ್ 15 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್‌ಗಳ ಸಹಿತ ಅಜೇಯ 34 ರನ್ ಗಳಿಸಿದ್ದರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ವಲಯ: 20 ಓವರ್‌ಗಳಲ್ಲಿ 173/6
(ರಿಕಿ 50, ವಿಜಯ್ ಶಂಕರ್ ಅಜೇಯ 34, ಮಾಯಾಂಕ್ ಅಗರವಾಲ್ 2-31, ಆಶೀಷ್ ನೆಹ್ರಾ 2-35)
ಉತ್ತರ ವಲಯ: 18.4 ಓವರ್‌ಗಳಲ್ಲಿ 176/2
(ಗೌತಮ್ ಗಂಭೀರ್ 81, ಶಿಖರ್ ಧವನ್ 50, ಎಂ.ಅಶ್ವಿನ್ 1-23)
ಕೇಂದ್ರ ವಲಯಕ್ಕೆ ಜಯ
ಮುಂಬೈ, ಫೆ.12: ಹರ್‌ಪ್ರೀತ್ ಸಿಂಗ್ ಸಿಡಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ಕೇಂದ್ರ ವಲಯ ಸ್ಟಾರ್ ಆಟಗಾರರನ್ನು ಒಳಗೊಂಡ ಪಶ್ಚಿಮ ವಲಯವನ್ನು 6 ವಿಕೆಟ್‌ಗಳ ಅಂತರದಿಂದ ಮಣಿಸಿತು.
ವಾಂಖೆಡೆ ಸ್ಟೇಡಿಯಂನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 161 ರನ್ ಚೇಸಿಂಗ್ ನಡೆಸಿದ ಕೇಂದ್ರ ವಲಯ ತಂಡ ಹರ್‌ಪ್ರೀತ್ ಸಿಂಗ್(62), ಅಂಬಟಿ ರಾಯುಡು(24) ಹಾಗೂ ಮಹೇಶ್ ರಾವತ್(ಅಜೇಯ 30) ಸಾಹಸದಿಂದ ಇನ್ನೂ 10 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಪಶ್ಚಿಮ ವಲಯ ತಂಡ ಒಂದು ಹಂತದಲ್ಲಿ 71 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ 6ನೆ ವಿಕೆಟ್‌ಗೆ 41 ರನ್ ಜೊತೆಯಾಟ ನಡೆಸಿದ ದೀಪಕ್ ಹೂಡಾ(ಅಜೇಯ 49) ಹಾಗೂ ಆದಿತ್ಯ ತಾರೆ(40) ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.
ಕೇಂದ್ರ ವಲಯದ ಬೌಲರ್‌ಗಳು ಫಾರ್ಮ್‌ನಲ್ಲಿರುವ ಗುಜರಾತ್ ನಾಯಕ ಪಾರ್ಥಿವ್ ಪಟೇಲ್(16) ಹಾಗೂ ಪ್ರಿಯಾಂಕ್ ಪಾಂಚಾಲ್(12)ರನ್ನು ಬೇಗನೆ ಔಟ್ ಮಾಡಿದರು. ಶ್ರೇಯಸ್ ಅಯ್ಯರ್(7), ಕೇದಾರ್ ಜಾದವ್(8) ಹಾಗೂ ಇರ್ಫಾನ್ ಪಠಾಣ್(4) ಬೇಗನೆ ವಿಕೆಟ್ ಒಪ್ಪಿಸಿದರು.







