‘ವೆಬ್‌ನಲ್ಲಿಯ ವಿಷಯಗಳ ಮೇಲೆ ತನಗೆ ನಿಯಂತ್ರಣವಿಲ್ಲ’
ಸುಪ್ರೀಂ ಕೋರ್ಟ್‌ನಲ್ಲಿ ಫೇಸ್‌ಬುಕ್ ಇಂಡಿಯಾದ ಹೇಳಿಕೆ
ಹೊಸದಿಲ್ಲಿ, ಫೆ.12: ಭಾರತೀಯ ಬಳಕೆದಾರರು ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ವಿಷಯಗಳ ಮೇಲೆ ತನಗೆ ಯಾವುದೇ ನಿಯಂತ್ರಣವಿಲ್ಲ ಎಂದು ಫೇಸ್‌ಬುಕ್ ಇಂಡಿಯಾ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ಭಾರತೀಯ ಬಳಕೆದಾರರು ಫೇಸ್‌ಬುಕ್‌ನಲ್ಲಿ ನೋಂದಾಯಿಸಿಕೊಳ್ಳುವಾಗ ಕಂಪೆನಿಯ ಐರ್ಲಂಡ್ ಕಚೇರಿಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾರೆ ಮತ್ತು ಅವರು ಪೋಸ್ಟ್ ಮಾಡುವ ವಿಷಯಗಳ ಹೊಣೆಗಾರಿಕೆಯನ್ನು ಭಾರತದಲ್ಲಿಯ ಫೇಸ್‌ಬುಕ್ ಕಚೇರಿ ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅದು ವಿವರಿಸಿದೆ. ಫೇಸ್‌ಬುಕ್ ಇಂಡಿಯಾ ಹೈದರಾಬಾದ್‌ನಲ್ಲಿ ಕಚೇರಿಯನ್ನು ಹೊಂದಿದೆ.
ಯಾವುದೇ ರೂಪದಲ್ಲಿ ಆನ್‌ಲೈನ್ ವೇದಿಕೆಯನ್ನು ತಾನು ನಿರ್ವಹಿಸುತ್ತಿಲ್ಲ ಮತ್ತು ನಿಯಂತ್ರಿಸುತ್ತಿಲ್ಲ. ಬಳಕೆದಾರರು ತಮ್ಮ ಕಂಪ್ಯೂಟರ್,ಟ್ಯಾಬ್ಲೆಟ್ ಮತ್ತು ಮೊಬೈಲ್ ಫೋನ್‌ಗಳ ಮೂಲಕ ಫೇಸ್‌ಬುಕ್‌ನ್ನು ಸಂಪರ್ಕಿಸುತ್ತಾರೆ. ಭಾರತದಲ್ಲಿ ವ್ಯವಹಾರವನ್ನು ನಡೆಸಲು ಹಾಗೂ ಆನ್‌ಲೈನ್ ಮತ್ತು ತಾಂತ್ರಿಕ ಬೆಂಬಲವನ್ನು ನೀಡುವುದಕ್ಕಷ್ಟೇ ತನ್ನ ಪಾತ್ರ ಸೀಮಿತವಾಗಿದೆ ಎಂದು ಫೇಸ್‌ಬುಕ್ ಇಂಡಿಯಾ ನ್ಯಾಯಾಲಯಕ್ಕೆ ತಿಳಿಸಿದೆ.
ಅಮೆರಿಕದ ಡೆಲಾವೇರ್‌ನ ಕಾನೂನಿನಡಿ ಸ್ಥಾಪಿತ ಫೇಸ್‌ಬುಕ್ ಇನ್‌ಕಾರ್ಪೊರೇಟೆಡ್ ಮತ್ತು ಡಬ್ಲಿನ್‌ನ್ನು ತನ್ನ ಪ್ರಧಾನ ವ್ಯವಹಾರ ಸ್ಥಳವನ್ನಾಗಿ ಹೊಂದಿರುವ ಫೇಸ್‌ಬುಕ್ ಐರ್ಲಂಡ್ ಭಾರತದಲ್ಲಿ ಫೇಸ್‌ಬುಕ್ ಸೇವೆಯನ್ನು ನಿರ್ವಹಿಸುತ್ತಿವೆ. ಅಮೆರಿಕ ಮತ್ತು ಕೆನಡಾ ಹೊರತುಪಡಿಸಿ ಇತರ ಎಲ್ಲ ಬಳಕೆದಾರರು ಫೇಸ್‌ಬುಕ್ ಐರ್ಲಂಡ್ ಜೊತೆ ಒಪ್ಪಂದ ಹೊಂದಿರುತ್ತಾರೆ. ಹೀಗಾಗಿ ಭಾರತೀಯ ಬಳಕೆದಾರರಿಗೆ ಸಂಬಂಧಿಸಿದಂತೆ ಮಾಹಿತಿಗಳ ಮೇಲೆ ಫೇಸ್‌ಬುಕ್ ಐರ್ಲಂಡ್ ನಿಯಂತ್ರಣ ಹೊಂದಿದೆ ಮತ್ತು ದೂರಿನಲ್ಲಿ ವ್ಯಕ್ತಪಡಿಸಿರುವ ಕಳವಳಗಳನ್ನು ನಿವಾರಿಸಲು ಸೂಕ್ತ ಸಂಸ್ಥೆಯಾಗಿದೆ ಎಂದು ಫೇಸ್‌ಬುಕ್ ಇಂಡಿಯಾ ಹೇಳಿದೆ.
ಫೇಸ್‌ಬುಕ್‌ನಲ್ಲಿ ಲೈಂಗಿಕ ಹಿಂಸಾಚಾರಗಳನ್ನು ಅಭಿವ್ಯಕ್ತಿಗೊಳಿಸುವ ವೀಡಿಯೊಗಳಿಗೆ ತಡೆಯೊಡ್ಡಬೇಕು ಎಂದು ಕೋರಿ ಎನ್‌ಜಿಒ ಪ್ರಜ್ವಲಾ ಬರೆದಿದ್ದ ಪತ್ರದ ಆಧಾರದಲ್ಲಿ ಸ್ವಯಂಪ್ರೇರಿತ ದೂರಿಗೆ ಸಂಬಂಧಿಸಿದಂತೆ ನ್ಯಾಯಾಲಯದ ನೋಟಿಸಿಗೆ ನೀಡಿರುವ ಉತ್ತರದಲ್ಲಿ ಫೇಸ್‌ಬುಕ್ ಇಂಡಿಯಾ ಈ ವಾದವನ್ನು ಮಂಡಿಸಿದೆ. ದೂರುಅರ್ಜಿಯಲ್ಲಿ ತನ್ನನ್ನು ಕಕ್ಷಿಯನ್ನಾಗಿ ಮಾಡುವುದು ಸೂಕ್ತವಲ್ಲ ಮತ್ತು ಅದು ಅಗತ್ಯವೂ ಅಲ್ಲ ಎಂದು ಹೇಳಿರುವ ಅದು, ಈ ಹಿಂದೆ ಇಂತಹುದೇ ದೂರುಗಳಿಗೆ ಸಂಬಂಧಿಸಿದಂತೆ ತನ್ನ ಈ ಮನವಿಯನ್ನು ಒಪ್ಪಿಕೊಂಡ ದಿಲ್ಲಿ ಉಚ್ಚ ನ್ಯಾಯಾಲಯದ ಕೆಲವು ನಿರ್ಧಾರಗಳನ್ನು ಉಲ್ಲೇಖಿಸಿದೆ.
ಫೇಸ್‌ಬುಕ್ ಐರ್ಲಂಡ್ ಕಂಪೆನಿಯು ಸರ್ವೋಚ್ಚ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯಲ್ಲಿಲ್ಲ,ಆದರೆ ಕೇಂದ್ರದ ನೆರವಿನೊಂದಿಗೆ ಅದು ತನ್ನ ಆದೇಶವನ್ನು ಜಾರಿಗೊಳಿಸಬಹುದಾಗಿದೆ.





