ಯೋಧರಿಗೆ ಖೋಟಾ ನೋಟು ಪತ್ತೆ ತರಬೇತಿ
ಕೋಲ್ಕತಾ, ಫೆ.12: ಭಾರತ-ಬಾಂಗ್ಲಾದೇಶ ಗಡಿಯ ಮೂಲಕ ಕಳ್ಳಸಾಗಣೆ ಯಾಗುತ್ತಿರುವ ಖೋಟಾ ನೋಟುಗಳನ್ನು ಗುರುತಿಸಲು ತನ್ನ ಯೋಧರಿಗೆ ತರಬೇತಿ ನೀಡುವ ಬಗ್ಗೆ ಗಡಿ ರಕ್ಷಣಾ ಪಡೆ(ಬಿಎಸ್‌ಎಫ್)ಯು ಆರ್‌ಬಿಐ ಜೊತೆಗೆ ಮಾತುಕತೆ ನಡೆಸುತ್ತಿದೆ.
ಕಳೆದ ಒಂದು ತಿಂಗಳಿನಿಂದ ಗಡಿಯಲ್ಲಿ ಭಾರೀಪ್ರಮಾಣದಲ್ಲಿ 2,000 ರೂ.ಗಳ ಖೋಟಾನೋಟುಗಳನ್ನು ವಶಪಡಿಸಿಕೊಳ್ಳಲಾಗುತ್ತಿದ್ದು, ಇದು ಬಿಎಸ್‌ಎಫ್ ಮತ್ತು ಗುಪ್ತಚರ ಸಂಸ್ಥೆಗಳನ್ನು ನಿದ್ದೆಗೆಡಿಸಿದೆ.
ಭದ್ರತಾ ಏಜನ್ಸಿಗಳು ವಶಪಡಿಸಿಕೊಳ್ಳುತ್ತಿರುವ ಖೋಟಾ ನೋಟುಗಳ ಪ್ರಮಾಣವು ಕಳವಳವನ್ನು ಹುಟ್ಟಿಸಿದೆ. ನೋಟಿನಲ್ಲಿಯ ಭದ್ರತಾ ಲಕ್ಷಣಗಳನ್ನು ಅತ್ಯಂತ ಕೌಶಲಪೂರ್ವಕವಾಗಿ ನಕಲು ಮಾಡಲಾಗಿದೆ. ಹೊಸ 2,000 ರೂ.ನೋಟಿನಲ್ಲಿರುವ ಅರ್ಧದಷ್ಟು ಭದ್ರತಾ ವೈಶಿಷ್ಟಗಳು ಖೋಟಾ ನೋಟುಗಳಲ್ಲಿವೆ. ಮೇಲ್ನೋಟಕ್ಕೆ ಖೋಟಾ ನೋಟು ಎನ್ನುವುದೂ ಗೊತ್ತಾಗುತ್ತಿಲ್ಲ. ಹೀಗಾಗಿ ಖೋಟಾ ನೋಟುಗಳ ಪತ್ತೆಗಾಗಿ ನಮ್ಮ ಯೋಧರು ಮತ್ತು ಅಧಿಕಾರಿಗಳಿಗೆ ತರಬೇತಿ ಕೊಡಿಸುವ ಬಗ್ಗೆ ಆರ್‌ಬಿಐ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಹಿರಿಯ ಬಿಎಸ್‌ಎಫ್ ಅಧಿಕಾರಿಯೋರ್ವರು ತಿಳಿಸಿದರು.
ತಂತ್ರಜ್ಞಾನದ ಮೂಲಕ ಅಥವಾ ಭೌತಿಕವಾಗಿ ಖೋಟಾ ಮತ್ತು ಅಸಲಿ ನೋಟುಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯ ನಮ್ಮ ಯೋಧರಲ್ಲಿರಬೇಕು ಎಂದು ನಾವು ಬಯಸಿದ್ದೇವೆ. 2,000 ರೂ.ನೋಟಿನಲ್ಲಿ 17 ಭದ್ರತಾ ವೈಶಿಷ್ಟಗಳಿವೆ. ಹೆಚ್ಚಿನ ಸಂಖ್ಯೆಯ ಭದ್ರತಾ ವೈಶಿಷ್ಟಗಳನ್ನು ಯಥಾವತ್ತಾಗಿ ನಕಲು ಮಾಡಲಾಗುತ್ತಿದ್ದು,ಇದನ್ನು ಪತ್ತೆ ಹಚ್ಚಲು ನಮ್ಮ ಯೋಧರು ನುರಿತಿರಬೇಕು ಎಂದರು.
ಭಾರತ-ಬಾಂಗ್ಲಾದೇಶ ಗಡಿಯಲ್ಲಿ, ವಿಶೇಷವಾಗಿ ಮಾಲ್ಡಾ-ಮುರ್ಷಿದಾಬಾದ್ ಜಿಲ್ಲೆಯೊಳಗೆ ನುಸುಳಿ ಬರುತ್ತಿದ್ದ ಖೋಟಾ ನೋಟುಗಳ ಹುಲುಸಾದ ದಂಧೆಗೆ ನ.8ರ ನೋಟು ಅಮಾನ್ಯದ ಬಳಿಕ ತಡೆ ಬಿದ್ದಿದೆ ಎಂದೇ ಭಾವಿಸಲಾಗಿತ್ತು. ಆದರೆ ಶೇ.50-60ರಷ್ಟು ಭದ್ರತಾ ವೈಶಿಷ್ಟಗಳನ್ನು ಯಥಾವತ್ತಾಗಿ ನಕಲು ಮಾಡಿರುವ 2,000 ರೂ.ಗಳ ಖೋಟಾನೋಟುಗಳು ಪತ್ತೆಯಾದ ಬಳಿಕ ಅಪಾಯದ ಗಂಟೆ ಮತ್ತೆ ಬಾರಿಸಿದೆ.
ಡಿಸೆಂಬರ್,2016-ಜನವರಿ,2017 ಅವಧಿಯಲ್ಲಿ ಮಾಲ್ಡಾ ಜಿಲ್ಲೆಗೆ ಸಮೀಪದ ಗಡಿಗಳಲ್ಲಿ 2,000 ರೂ.ಗಳ ಖೋಟಾನೋಟುಗಳನ್ನು ವಶಪಡಿಸಿಕೊಂಡ ಕೆಲವು ಪ್ರಕರಣಗಳು ವರದಿಯಾಗಿವೆ.
ಫೆ.8ರಂದು ಮುರ್ಷಿದಾಬಾದ್ ಜಿಲ್ಲೆಯಲ್ಲಿ ಪ.ಬಂಗಾಲ ಪೊಲೀಸರು 2,000 ರೂ.ಗಳ 40 ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದರು.





