ಅಂಧರ ಟ್ವೆಂಟಿ-20 ವಿಶ್ವಕಪ್: ಭಾರತ ಚಾಂಪಿಯನ್

ಬೆಂಗಳೂರು, ಫೆ.12: ಅಂಧರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದ ಹಾಲಿ ಚಾಂಪಿಯನ್ ಭಾರತ ತಂಡ ನಿರೀಕ್ಷೆಯಂತೆಯೇ ಚಾಂಪಿಯನ್‌ಪಟ್ಟವನ್ನು ಅಲಂಕರಿಸಿದೆ.
ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರವಿವಾರ ನಡೆದ ಅಂತಿಮ ಹಣಾಹಣಿಯಲ್ಲಿ ಪಾಕಿಸ್ತಾನ ವಿರುದ್ಧ ಗೆಲುವಿಗೆ 198 ರನ್ ಕಠಿಣ ಗುರಿ ಪಡೆದಿದ್ದ ಭಾರತ 17.4 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಸತತ 2ನೆ ಪ್ರಶಸ್ತಿ ಜಯಿಸಿತು.
ಭಾರತ ಹಾಗೂ ಪಾಕಿಸ್ತಾನ ತಂಡ ಲೀಗ್ ಹಾಗೂ ನಾಕೌಟ್ ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಅಂತಿಮ ಸುತ್ತು ತಲುಪಿದ್ದವು. ಭಾರತ 9 ಪಂದ್ಯಗಳಲ್ಲಿ 8ರಲ್ಲಿ ಜಯ ಸಾಧಿಸಿ ಪ್ರಶಸ್ತಿ ಫೇವರಿಟ್ ಆಗಿ ಗುರುತಿಸಿಕೊಂಡಿತ್ತು. ಒಂದು ಪಂದ್ಯವನ್ನು ಪಾಕ್ ವಿರುದ್ಧವೇ ಸೋತಿತ್ತು.
ಭಾರತದ ಆರಂಭಿಕ ಆಟಗಾರ ಪ್ರಕಾಶ್ ಜಯರಾಮಯ್ಯ(99, 66 ಎಸೆತ, 15 ಬೌಂಡರಿ) ನಾಯಕ ಅಜಯ್ ಕುಮಾರ್ ರೆಡ್ಡಿ(43) ಅವರೊಂದಿಗೆ ಮೊದಲ ವಿಕೆಟ್‌ಗೆ 110 ರನ್ ಸೇರಿಸಿ ತಂಡದ ಚೇಸಿಂಗ್‌ಗೆ ಭದ್ರ ಬುನಾದಿ ಹಾಕಿಕೊಟ್ಟರು.
ಇದಕ್ಕೆ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಮಾಡಿದ್ದ ಪಾಕ್ ತಂಡ ಬಾದರ್ ಮುನೀರ್(57 ರನ್, 37 ಎಸೆತ) ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 197 ರನ್ ಗಳಿಸಿತು.
ಭಾರತದ ಪರ ಕೇತನ್ ಪಟೇಲ್ ಹಾಗೂ ಜಾಫರ್ ಇಕ್ಬಾಲ್ ತಲಾ ಎರಡು ವಿಕೆಟ್ ಪಡೆದರು.







