ಮುಸ್ಲಿಮನಾಗಿದ್ದೂ ಭಾರತ ತಂಡಕ್ಕೆ ಏಕೆ ಆಡುತ್ತಿದ್ದಿ ಎಂದು ಕೇಳಿದ ಪಾಕ್ ಹುಡುಗಿಗೆ ಇರ್ಫಾನ್ ಪಠಾಣ್ ನೀಡಿದ ಉತ್ತರವೇನು?

ನಾಗಪುರ,ಫೆ.12: ಮುಸ್ಲಿಮನಾಗಿದ್ದೂ ಭಾರತ ತಂಡಕ್ಕಾಗಿ ಏಕೆ ಆಡುತ್ತಿದ್ದೀಯಾ? ಇದು ಲಾಹೋರದಲ್ಲಿ ಪಾಕಿಸ್ತಾನದ ವಿರುದ್ಧ ಪಂದ್ಯದ ಸಂದರ್ಭದಲ್ಲಿ ಕ್ರಿಕೆಟಿಗ ಇರ್ಫಾನ್ ಪಠಾಣ್‌ಗೆ ಅಲ್ಲಿಯ ಹುಡುಗಿಯೋರ್ವಳು ಕೇಳಿದ್ದ ಪ್ರಶ್ನೆ. ಇದಕ್ಕೆ ತಾನು ನೀಡಿದ್ದ ಉತ್ತರವನ್ನು ನಾಗಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಇರ್ಫಾನ್ ನೆನಪಿಸಿಕೊಂಡರು.
ಇರ್ಫಾನ್ ಕಾರ್ಯಕ್ರಮದಲ್ಲಿ ಹಲವಾರು ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದರಾದರೂ ಅವರು ನೆನಪಿಸಿಕೊಂಡ ಲಾಹೋರದ ಘಟನೆ ಅವರ ದೇಶಪ್ರೇಮ ಮತ್ತು ತ್ರಿವರ್ಣದೆಡೆಗೆ ಅವರ ಪ್ರೀತಿಯನ್ನು ಪ್ರತಿಬಿಂಬಿಸುವ ಜೊತೆಗೆ ಸಭಿಕರ ದೇಶಾಭಿಮಾನವನ್ನು ಜಾಗ್ರತಗೊಳಿಸಿತ್ತು.
ದೇಶಕ್ಕಾಗಿ ಆಡುವದು ಪ್ರತಿಯೊಬ್ಬ ಆಟಗಾರನಿಗೂ ಗೌರವದ ವಿಷಯವಾಗಿದೆಯಾದರೂ ವೈಯಕ್ತಿಕವಾಗಿ ತನಗೆ ದೇಶವನ್ನು ಪ್ರತಿನಿಧಿಸುವುದು ಹೆಮ್ಮೆಯ ವಿಷಯವಾಗಿತ್ತು ಎಂದು ಇರ್ಫಾನ್ ಹೇಳಿದರು.
ತನ್ನ ಕ್ರಿಕೆಟ್ ಬದುಕಿನ ಕೆಲವು ಸ್ಮರಣೀಯ ಘಳಿಗೆಗಳನು ಅವರು ಹಂಚಿಕೊಂಡರು. ನೀನು ಮುಸ್ಲಿಮನಾಗಿದ್ದೂ ಭಾರತ ತಂಕ್ಕಾಗಿ ಏಕೆ ಆಡುತ್ತಿದ್ದೀಯಾ ಎಂಬ ಲಾಹೋರ್ ಹುಡುಗಿಯ ಅಸಂಬದ್ಧ ಪ್ರಶ್ನೆಗೆ ಇರ್ಫಾನ್, ಭಾರತಕ್ಕಾಗಿ ಆಡುವುದು ನನ್ನ ಪಾಲಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಉತ್ತರಿಸಿದ್ದರು. ನನ್ನ ವೃತ್ತಿಜೀವನದಲ್ಲಿ ನನ್ನ ಬಗ್ಗೆ ನಾನು ಹೆಮ್ಮೆ ಪಟ್ಟುಕೊಂಡ ಹಲವಾರು ಸಂದರ್ಭಗಳಿದ್ದರೂ ಅಂದಿನ ಆ ಘಟನೆ ನನ್ನನ್ನು ಇಂದಿಗೂ ಉತ್ತಮ ಸಾಧನೆಗೆ ಪ್ರೇರೇಪಿಸುತ್ತಿದೆ ಎಂದು ಅವರು ಹೇಳಿದರು.
ಅಂದಿನ ಭಾರತೀಯ ಕ್ರಿಕೆಟ್ ತಂಡದ ನಾಯಕ ಸೌರವ್ ಗಂಗೂಲಿ ಅವರಿಂದ ತಂಡದ ಕ್ಯಾಪ್ ಸ್ವೀಕರಿಸಿದ್ದು ತನ್ನ ಜೀವನದ ಅತ್ಯಂತ ಸ್ಮರಣೀಯ ಘಳಿಗೆಯಾಗಿದೆ ಎಂದು ಅವರು ಹೇಳಿದರು.







