ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಅಶ್ವಿನ್, ಜಡೇಜ ಸ್ಪಿನ್ ದಾಳಿಗೆ ಬೆದರಿದ ಬಾಂಗ್ಲಾಟೈಗರ್

ಹೈದರಾಬಾದ್, ಫೆ.13: ಅವಳಿ ಸ್ಪಿನ್ನರ್‌ಗಳಾದ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜ ದಾಳಿಗೆ ನಿರುತ್ತರವಾದ ಬಾಂಗ್ಲಾದೇಶ ತಂಡ ಭಾರತ ವಿರುದ್ಧ ಇಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ 208 ರನ್‌ಗಳ ಅಂತರದಿಂದ ಸೋತಿದೆ.
ಈ ಗೆಲುವಿನ ಮೂಲಕ ಭಾರತ ಏಕೈಕ ಪಂದ್ಯವನ್ನು ಗೆದ್ದುಕೊಂಡಿದ್ದು, ಅಜೇಯ ಗೆಲುವಿನ ಓಟವನ್ನು 20ಕ್ಕೆ ವಿಸ್ತರಿಸಿದೆ. ಭಾರತ 2015ರಲ್ಲಿ ಶ್ರೀಲಂಕಾ ವಿರುದ್ಧ ಸರಣಿ ಜಯ ಸಾಧಿಸಿದ ಬಳಿಕ ಸತತ 6ನೆ ಟೆಸ್ಟ್ ಸರಣಿ ಗೆದ್ದುಕೊಂಡು ಶ್ರೇಷ್ಠ ಸಾಧನೆ ಮಾಡಿದೆ. ಈ ಹಿಂದೆ 2008 ಹಾಗೂ 2010ರ ನಡುವೆ ಸತತ 5 ಟೆಸ್ಟ್ ಸರಣಿ ಗಳಲ್ಲಿ ಗೆದ್ದುಕೊಂಡ ಸಾಧನೆ ಮಾಡಿತ್ತು.
ಐದನೆ ಹಾಗೂ ಅಂತಿಮ ದಿನವಾದ ಸೋಮವಾರ 3 ವಿಕೆಟ್ ನಷ್ಟಕ್ಕೆ 103 ರನ್‌ನಿಂದ ಎರಡನೆ ಇನಿಂಗ್ಸ್ ಮುಂದುವರಿಸಿದ ಬಾಂಗ್ಲಾದೇಶ 250 ರನ್‌ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಬಾಂಗ್ಲಾದ ಪರ ಮಹಮುದುಲ್ಲಾ(64) ಅಗ್ರ ಸ್ಕೋರರ್ ಎನಿಸಿಕೊಂಡರು. ಅಶ್ವಿನ್(4-73), ಜಡೇಜ(4-78) 8 ವಿಕೆಟ್‌ಗಳನ್ನು ಉರಳಿಸಿದರು. ವೇಗದ ಬೌಲರ್ ಇಶಾಂತ್ ಶರ್ಮ(2-40) ಉಳಿದೆರಡು ವಿಕೆಟ್ ಪಡೆದರು.
ನಾಲ್ಕನೆ ದಿನವಾದ ರವಿವಾರ 2ನೆ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 159 ರನ್‌ಗೆ ಇನಿಂಗ್ಸ್ ಡಿಕ್ಲೇರ್ ಮಾಡಿದ್ದ ಭಾರತ ತಂಡ ಬಾಂಗ್ಲಾದ ಗೆಲುವಿಗೆ 459 ರನ್ ಗುರಿ ನೀಡಿತ್ತು.
ಎರಡೂ ಇನಿಂಗ್ಸ್‌ನಲ್ಲಿ 100ಕ್ಕೂ ಅಧಿಕ ಓವರ್‌ಗಳನ್ನು ಎದುರಿಸಿದ ಬಾಂಗ್ಲಾ ಉತ್ತಮ ಹೋರಾಟ ನೀಡಿದರೂ ಗೆಲುವು ದಕ್ಕಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿದ ನಾಯಕ ವಿರಾಟ್ ಕೊಹ್ಲಿ(204) ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಅಂಕಿ-ಅಂಶ
19: ಭಾರತ ಟೆಸ್ಟ್‌ನಲ್ಲಿ ಸತತ 19 ಪಂದ್ಯಗಳಲ್ಲಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿದೆ. ಟೆಸ್ಟ್ ಇತಿಹಾಸದಲ್ಲಿ ಇದು ತಂಡವೊಂದರ ಐದನೆ ಶ್ರೇಷ್ಠ ಸಾಧನೆ. ವೆಸ್ಟ್‌ಇಂಡೀಸ್ 1982-84ರಲ್ಲಿ 27 ಪಂದ್ಯಗಳಲ್ಲಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿತ್ತು.
01: ವಿರಾಟ್ ಕೊಹ್ಲಿ ಸತತ 19 ಪಂದ್ಯಗಳಲ್ಲಿ ಸೋಲನ್ನೇ ಕಾಣದ ಭಾರತದ ಮೊದಲ ನಾಯಕ. ಸುನಿಲ್ ಗವಾಸ್ಕರ್ ಸತತ 18 ಹಾಗೂ ಕಪಿಲ್‌ದೇವ್ 1985-87ರಲ್ಲಿ ಸತತ 17 ಟೆಸ್ಟ್ ಪಂದ್ಯಗಳಲ್ಲಿ ನಾಯಕರಾಗಿ ಸೋಲನ್ನು ಕಂಡಿರಲಿಲ್ಲ.
06: ಭಾರತ ಸತತ ಆರನೆ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ. 2008-10ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಐದು ಸರಣಿಯನ್ನು ಜಯಿಸಿದ ಸಾಧನೆ ಮಾಡಿತ್ತು. 2015ರ ಆಗಸ್ಟ್‌ನ ಬಳಿಕ ಭಾರತ ವಿದೇಶದಲ್ಲಿ ಶ್ರೀಲಂಕಾ ಹಾಗೂ ವೆಸ್ಟ್‌ಇಂಡೀಸ್‌ನ ವಿರುದ್ಧ, ಸ್ವದೇಶದಲ್ಲಿ ದಕ್ಷಿಣ ಆಫ್ರಿಕ, ನ್ಯೂಝಿಲೆಂಡ್, ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶದ ವಿರುದ್ಧ ಸ್ವದೇಶದಲ್ಲಿ ಸರಣಿ ಜಯಿಸಿದೆ. ಮುಂಬರುವ ಸರಣಿಯಲ್ಲಿ ಆಸ್ಟ್ರೇಲಿಯವನ್ನು ಎದುರಿಸಲಿರುವ ಭಾರತಕ್ಕೆ ಅಜೇಯ ದಾಖಲೆ ಮುಂದುವರಿಸುವ ಅವಕಾಶವಿದೆ.
15: ಕೊಹ್ಲಿ ನಾಯಕನಾಗಿ ಆಡಿರುವ 23 ಪಂದ್ಯಗಳ ಪೈಕಿ 15ರಲ್ಲಿ ಜಯ ಸಾಧಿಸಿದ್ದಾರೆ. ಈ ಮೂಲಕ ರಿಕಿ ಪಾಂಟಿಂಗ್ ಹಾಗೂ ಮೈಕಲ್ ವಾನ್(ತಲಾ 15) ಸಾಧನೆಯ ಕ್ಲಬ್‌ಗೆ ಸೇರ್ಪಡೆಯಾದರು.
50: ಆರ್.ಅಶ್ವಿನ್ ಟೆಸ್ಟ್‌ನ ನಾಲ್ಕನೆ ಇನಿಂಗ್ಸ್‌ನಲ್ಲಿ 50 ವಿಕೆಟ್ ಪಡೆದ ಸಾಧನೆ ಮಾಡಿದರು. ಈ ಸಾಧನೆ ಮಾಡಿದ ಭಾರತದ 3ನೆ ಬೌಲರ್ ಅಶ್ವಿನ್. ಈ ಹಿಂದೆ ಬಿಷನ್ ಸಿಂಗ್ ಬೇಡಿ ಹಾಗೂ ಅನಿಲ್ ಕುಂಬ್ಳೆ ಈ ಸಾಧನೆ ಮಾಡಿದ್ದರು.
228.2: ಬಾಂಗ್ಲಾದೇಶ ತಂಡ ಭಾರತ ವಿರುದ್ಧ ಟೆಸ್ಟ್‌ನಲ್ಲಿ ಗರಿಷ್ಠ ಓವರ್(228.2) ಬ್ಯಾಟಿಂಗ್ ನಡೆಸಿತು. 2000ರಲ್ಲಿ ಭಾರತ ವಿರುದ್ಧ ಢಾಕಾದಲ್ಲಿ ಆಡಿದ್ದ ತನ್ನ ಮೊತ್ತ ಮೊದಲ ಟೆಸ್ಟ್ ಪಂದ್ಯದಲ್ಲಿ 200ಕ್ಕೂ ಅಧಿಕ ಓವರ್ ಬ್ಯಾಟಿಂಗ್ ಮಾಡಿತ್ತು.
ಸ್ಕೋರ್ ವಿವರ
ಭಾರತ ಪ್ರಥಮ ಇನಿಂಗ್ಸ್: 687/6 ಡಿಕ್ಲೇರ್
ಬಾಂಗ್ಲಾದೇಶ ಪ್ರಥಮ ಇನಿಂಗ್ಸ್: 388
ಭಾರತ ದ್ವಿತೀಯ ಇನಿಂಗ್ಸ್: 159/4 ಡಿಕ್ಲೇರ್
ಬಾಂಗ್ಲಾದೇಶ ದ್ವಿತೀಯ ಇನಿಂಗ್ಸ್: 100.3 ಓವರ್‌ಗಳಲ್ಲಿ 250
ತಮೀಮ್ ಇಕ್ಬಾಲ್ ಸಿ ಕೊಹ್ಲಿ ಬಿ ಅಶ್ವಿನ್ 03
ಸರ್ಕಾರ್ ಸಿ ರಹಾನೆ ಬಿ ಜಡೇಜ 42
ಮೊಮಿನುಲ್ ಹಕ್ ಸಿ ರಹಾನೆ ಬಿ ಅಶ್ವಿನ್ 27
ಮಹಮ್ಮುದುಲ್ಲಾ ಸಿ ಕುಮಾರ್ ಬಿ ಶರ್ಮ 64
ಶಾಕಿಬ್ ಅಲ್ ಹಸನ್ ಸಿ ಪೂಜಾರ ಬಿ ಜಡೇಜ 22
ಮುಶ್ಫಿಕುರ್ರಹೀಂ ಸಿ ಜಡೇಜ ಬಿ ಅಶ್ವಿನ್ 23
ಶಬ್ಬೀರ್ರಹ್ಮಾನ್ ಎಲ್ಬಿಡಬ್ಲು ಶರ್ಮ 22
ಮೆಹೆದಿ ಹಸನ್ ಸಿ ಸಹಾ ಬಿ ಜಡೇಜ 23
ಕಮ್ರುಲ್ ಇಸ್ಲಾಂ ಅಜೇಯ 03
ತೈಜುಲ್ ಇಸ್ಲಾಂ ಸಿ ರಾಹುಲ್ ಬಿ ಜಡೇಜ 06
ತಸ್ಕನ್ ಅಹ್ಮದ್ ಎಲ್ಬಿಡಬ್ಲು ಅಶ್ವಿನ್ 01
ಇತರ 14
ವಿಕೆಟ್ ಪತನ: 1-11, 2-71, 3-75, 4-106, 5-162, 6-213, 7-225, 8-242, 9-249, 10-250.
ಬೌಲಿಂಗ್ ವಿವರ:
ಭುವನೇಶ್ವರ ಕುಮಾರ್ 8-4-15-0
ಆರ್.ಅಶ್ವಿನ್ 30.3-10-73-4
ಇಶಾಂತ್ ಶರ್ಮ 13-3-40-2
ಉಮೇಶ್ ಯಾದವ್ 12-2-33-0
ಜಡೇಜ 37-15-78-4
ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ .







