150 ರೂ.ಗಾಗಿ ಗೆಳೆಯರಿಂದ 14 ವರ್ಷದ ಬಾಲಕನ ಬಲಿ !

ಕೃಷ್ಣನಗರ್ ,ಫೆ.13 : 150 ರೂಪಾಯಿಗಾಗಿ ಹದಿನಾಲ್ಕುವರ್ಷದ ಬಾಲಕನನ್ನುಆತನ ಗೆಳೆಯರು ಕೊಂದಿದ್ದಾರೆ. ಪಶ್ಚಿಮ ಬಂಗಾಳದ ಕೃಷ್ಣನಗರದಲ್ಲಿ ಘಟನೆ ನಡೆದಿದೆ. ದೇಬಾಶಿಸ್ ಭೌಮಿಕ್ ಎನ್ನುವ 14ವರ್ಷದ ಬಾಲಕ ಕ್ರೂರವಾಗಿ ಕೊಲೆಯಾಗಿದ್ದಾನೆ. ಆರೋಪಿಗಳು ಕೂಡಾ ಬಾಲಕರೇ ಆಗಿದ್ದಾರೆ. ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಫೆಬ್ರವರಿ 8ರಂದು ರಾತ್ರಿ ಭೌಮಿಕ್ ಮತ್ತು ಇಬ್ಬರು ಗೆಳೆಯರು ಸೇರಿ ಮದ್ಯಪಾನಮಾಡಿದ್ದರು. ಮಾತಿನ ವಾಗ್ವಾದ ನಡೆದು ಗೆಳೆಯರಲ್ಲೊಬ್ಬ ಭೌಮಿಕ್‌ನ ತಲೆಗೆ ಮದ್ಯದ ಬಾಟ್ಲಿಯಿಂದ ಹೊಡೆದಿದ್ದಾನೆ. ಭೌಮಿಕ್ ಮೃತಪಟ್ಟ ಎಂದು ಸ್ಪಷ್ಟವಾದ ಬಳಿಕ ಗೆಳೆಯರು ಮೃತದೇಹವನ್ನು ಸಮೀಪದ ಕೆಸರಿದ್ದ ಹೊಂಡದೊಳಗೆ ಹೂತು ಹಾಕಿದ್ದರು.
ಘಟನೆಯ ದಿವಸ ಸಂಜೆ 4:15 ಗಂಟೆಗೆ ಪಿಯೊನ್‌ಪರದ ತನ್ನ ಮನೆಯಿಂದ ಭೌಮಿಕ್ ಗೆಳೆಯರ ಜೊತೆ ಆಡಲು ಹೊರಟು ಹೋಗಿದ್ದ. ರಾತ್ರಿಯಾದರೂ ಹುಡುಗ ಮರಳಿ ಬಂದಿರಲಿಲ್ಲ. ಮನೆಯವರು ಹುಡುಕಿದರೂ ಬಾಲಕ ಪತ್ತೆಯಾಗಿರಲಿಲ್ಲ. ಮರುದಿವಸ ಭೌಮಿಕ್‌ನ ಅಮ್ಮ ಕೋಟ್ವಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ತನಿಖೆ ನಡೆಸಿದಾಗ ಭೌಮಿಕ್‌ನ ಮನೆಯಿಂದ ಎರಡು ಕಿಲೊಮೀಟರ್ ದೂರದ ನಿರ್ಜನ ಪ್ರದೇಶದ ಹೆಲಿಪ್ಯಾಡ್‌ನ ಸಮೀಪದ ಕಾಡಿನಲ್ಲಿ ಭೌಮಿಕ್‌ನ ಸೈಕಲ್ ಪತ್ತೆಯಾಗಿತ್ತು. ಭೌಮಿಕ್‌ನ ಜೊತೆಗೆ ಇತರ ಇಬ್ಬರು ಮಕ್ಕಳಿದ್ದುದನ್ನು ನಾವು ನೋಡಿದ್ದೇವೆಂದು ಸ್ಥಳೀಯನಿವಾಸಿಗಳು ಪೊಲೀಸರಿಗೆ ತಿಳಿಸಿದ್ದರು. ರವಿವಾರ ಇಬ್ಬರನ್ನೂ ಹಿಡಿದು ಪೊಲೀಸರು ತನಿಖೆ ನಡೆಸಿದಾಗ ಭೌಮಿಕ್‌ನ ಗೆಳೆಯರ ಕ್ರೂರ ಕೃತ್ಯ ಬಯಲಾಯಿತು. ಭೌಮಿಕ್‌ನನ್ನು ಕೊಂದು ಮುಚ್ಚಿಹಾಕಿದ ಗುಂಡಿಯನ್ನು ಕೆಲವು ದಿವಸಗಳ ಹಿಂದೆ ನಾವೇ ತೋಡಿದ್ದೆವು ಎಂದು ಆರೋಪಿಗಳಾದ ಇಬ್ಬರು ಬಾಲಕರು ಪೊಲೀಸರಿಗೆ ತಿಳಿಸಿದರು. ರವಿವಾರ ಮಧ್ಯಾಹ್ನ ಆರೋಪಿಗಳ ನೆರವಿನಲ್ಲಿ ಮೃತದೇಹವನ್ನು ಪತ್ತೆಮಾಡಲಾಯಿತು. ಒಡೆದ ಮದ್ಯದ ಬಾಟ್ಲಿಯನ್ನು ಸ್ಥಳದಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೂವರು ಸೇರಿ ಯಾವಾಗಲೂ ಮದ್ಯಪಾನ ಮಾಡುತ್ತಿದ್ದರು. ಭೌಮಿಕ್‌ನಿಂದ ಪಡೆದಿದ್ದ 150 ರೂಪಾಯಿಯ ಕುರಿತ ಜಗಳ ಸಾವಿನೊಂದಿಗೆ ಪರ್ಯಾವಸನಗೊಂಡಿತು ಎಂದು ಆರೋಪಿ ಬಾಲಕರು ಹೇಳಿದ್ದಾರೆ. ನಂತರ ಅವರನ್ನು ಜುವೈನಲ್ ಹೋಮ್‌ಗೆ ಪೊಲೀಸರು ಕಳುಹಿಸಿದ್ದಾರೆ ಎಂದು ವರದಿ ತಿಳಿಸಿದೆ.







