ರಾಜಕೀಯ ಸಂಘರ್ಷ: ಸಿಪಿಎಂ-ಬಿಜೆಪಿ ನಾಯಕರ ನಡುವೆ ಚರ್ಚೆ

ತಿರುವನಂತಪುರಂ,ಫೆ. 13: ರಾಜಕೀಯ ಸಂಘರ್ಷವನ್ನು ನಿಲ್ಲಿಸುವ ಪ್ರಯತ್ನದ ಅಂಗವಾಗಿ ಸಿಪಿಎಂ-ಬಿಜೆಪಿ, ಆರೆಸ್ಸೆಸ್ ರಾಜ್ಯ ನಾಯಕರು ಚರ್ಚೆನಡೆಸಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಆಧ್ಯಕ್ಷತೆಯಲ್ಲಿ ನಡೆದ ಚರ್ಚೆಯಲ್ಲಿ ಸಿಪಿಎಂ ರಾಜ್ಯ ಪ್ರಧಾನಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್, ನಾಯಕರಾದ ಆನತಲವಟ್ಟಂ ಆನಂದನ್, ಎಂವಿ ಗೋವಿಂದನ್, ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್, ನಾಯಕರಾದ ಒ. ರಾಜಗೋಪಾಲ್, ಆರೆಸ್ಸೆಸ್ ನಾಯಕ ಪಿ.ಗೋಪಾಲನ್‌ಕುಟ್ಟಿ ಮಾಸ್ಟರ್ ಮುಂತಾದವರು ಭಾಗವಹಿಸಿದರು. ಕಣ್ಣೂರಿನಲ್ಲಿನಾಳೆ ನಡೆಯಲಿರುವ ಸರ್ವಪಕ್ಷಗಳ ಸಭೆಯ ಪೂರ್ವಭಾವಿಯಾಗಿ ಈಚರ್ಚೆ ನಡೆದಿದೆ.
ಶಾಂತಿ ಸ್ಥಾಪಿಸಲು ರಾಜ್ಯ ನಾಯಕರು ನಡೆಸಿದ ಚರ್ಚೆಯಲ್ಲಿ ಒಮ್ಮತ ಮೂಡಿ ಬಂದಿದೆ ಎಂದು ಕೊಡಿಯೇರಿ ಬಾಲಕೃಷ್ಣನ್ ಪತ್ರಿಕೆಗಳಿಗೆ ತಿಳಿಸಿದ್ದಾರೆ. ಸಣ್ಣ ಪುಟ್ಟ ಸಮಸ್ಯೆಗಳು ಘರ್ಷಣೆಯಲ್ಲಿ ಪರ್ಯವಸಾನಗೊಳ್ಳುತ್ತಿವೆ. ಪಾರ್ಟಿಯ ಕಾರ್ಯಕರ್ತರಿಗೆ ವಿಷಯವನ್ನು ಮನದಟ್ಟುಮಾಡಬೇಕಾದ ಅಗತ್ಯವಿದೆ ಎಂದು ಕೊಡಿಯೇರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಾಂತಿಯ ವಾತಾವರಣ ನೆಲೆಸಲು ಸಹಕರಿಸಲು ಸಿದ್ಧವೆಂದು ಈ ಹಿಂದೆಯೇ ನಾವು ಹೇಳಿದ್ದೇವೆಂದು ಪಿ.ಗೋಪಾಲನ್‌ಕುಟ್ಟಿ ಮಾಸ್ಟರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಶಾಂತಿ ಸ್ಥಾಪಿಸಲು ಎಲ್ಲ ನೆರವನ್ನೂ ನೀಡುತ್ತೇವೆಂದು ಬಿಜೆಪಿ ರಾಜ್ಯ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಹೇಳಿದ್ದಾರೆ.ಪೊಲೀಸರು ನಿಷ್ಪಕ್ಷ ಮತ್ತು ನ್ಯಾಯಸಮ್ಮತ ಹಾಗೂ ಪ್ರಾಮಾಣಿಕವಾಗಿ ಇದಕ್ಕೆ ಶ್ರಮಿಸಬೇಕೆಂದು ಅವರು ಅಭಿಪ್ರಾಯಪಟ್ಟರು ಎಂದು ವರದಿ ತಿಳಿಸಿದೆ.







