ಫ್ರಾಂಚೈಸಿ ಟ್ವೆಂಟಿ-20 ಕ್ರಿಕೆಟ್ ಇತಿಹಾಸದಲ್ಲಿ ಅಸಾಮಾನ್ಯ ಸ್ಪರ್ಧೆ
22.7 ಓವರ್ ಪಂದ್ಯದಲ್ಲಿ 17 ವಿಕೆಟ್ ಪತನ, 119 ರನ್ ದಾಖಲು

ದುಬೈ, ಫೆ.13: ಪಾಕಿಸ್ತಾನ ಸೂಪರ್ ಲೀಗ್(ಪಿಎಸ್‌ಎಲ್)ಫ್ರಾಂಚೈಸಿ ಟ್ವೆಂಟಿ-20 ಇತಿಹಾಸದಲ್ಲಿ ಒಂದು ಅಸಾಮಾನ್ಯ ಸ್ಪರ್ಧೆಗೆ ಸಾಕ್ಷಿಯಾಗಿದೆ. ಪೇಶಾವರ ಹಾಗೂ ಲಾಹೋರ್ ತಂಡಗಳ ನಡುವಿನ ಪಂದ್ಯದಲ್ಲಿ ಉಭಯ ತಂಡಗಳು 22.7 ಓವರ್ ಆಟವಾಡಿದ್ದು, 17 ವಿಕೆಟ್‌ಗಳು ಪತನವಾಗಿ ಒಟ್ಟು 119 ರನ್ ದಾಖಲಾಗಿದೆ.
ರವಿವಾರ ಇಲ್ಲಿನ ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಲಾಹೋರ್ ಖ್ವಾಲಾಂಡರ್ಸ್ ತಂಡ 10.2 ಓವರ್‌ಗಳಲ್ಲಿ ಕೇವಲ 59 ರನ್‌ಗೆ ಆಲೌಟಾಯಿತು. ಇದು ಚುಟುಕು ಮಾದರಿ ಪಂದ್ಯದಲ್ಲಿ ದಾಖಲಾದ ಎರಡನೆ ಕನಿಷ್ಠ ಸ್ಕೋರ್.
ಗೆಲ್ಲಲು 60 ರನ್ ಗುರಿ ಪಡೆದಿದ್ದ ಪೇಶಾವರ ತಂಡ 17 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 18 ಎಸೆತಗಳು ಬಾಕಿ ಇರುವಾಗ ಗೆಲುವಿನ ದಡ ಸೇರಿತು.
ಡರೆನ್ ಸಮ್ಮಿ ನೇತೃತ್ವದ ಪೇಶಾವರ ತಂಡಕ್ಕೆ ಲಾಹೋರ್ ಸ್ಪಿನ್ನರ್ ಯಾಸಿರ್ ಶಾ(4-7) ದುಸ್ವಪ್ನವಾಗಿ ಕಾಡಿದರು. ಇಂಗ್ಲೆಂಡ್‌ನ ಇಯಾನ್ ಮೊರ್ಗನ್(23 ರನ್) ಪೇಶಾವರ ರನ್ ಚೇಸಿಂಗ್‌ಗೆ ಆಸರೆಯಾದರು. ತಾಳ್ಮೆಯ ಆಟವಾಡಿದ ಮೊರ್ಗನ್ 26 ಎಸೆತಗಳಲ್ಲಿ 3 ಬೌಂಡರಿಗಳುಳ್ಳ 23 ರನ್ ಗಳಿಸಿ ತಂಡಕ್ಕೆ ರೋಚಕ ಗೆಲುವು ತಂದರು.
4 ಓವರ್‌ಗಳಲ್ಲಿ ಕೇವಲ 7 ರನ್ ನೀಡಿ ನಾಲ್ಕು ವಿಕೆಟ್ ಉಡಾಯಿಸಿದ ಲಾಹೋರ್ ತಂಡದ ಬೌಲರ್ ಯಾಸಿರ್ ಶಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.







