ದಿಡ್ಡಳ್ಳಿ ಆದಿವಾಸಿಗಳಿಗೆ ಸ್ಥಳದಲ್ಲೇ ಭೂಮಿ ನೀಡಲು ದೊರೆಸ್ವಾಮಿ ಆಗ್ರಹ
►144 ಜಾರಿ ಹಿನ್ನಲೆ ಮಾಲ್ದಾರೆ ಬಳಿ ಹೋರಾಟಗಾರರನ್ನು ತಡೆದ ಪೊಲೀಸರು ►ಸರಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ದೊರೆಸ್ವಾಮಿ ಆಕ್ರೋಶ

ಸಿದ್ದಾಪುರ, ಫೆ.13: ಆದಿವಾಸಿಗಳ ಭೂಮಿ ಹಕ್ಕಿನ ಹೋರಾಟಕ್ಕೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ವಾಹನದಲ್ಲಿ ದಿಡ್ಡಳ್ಳಿಗೆ ತೆರಳುತ್ತಿದ್ದ ಸಂದರ್ಭ ನಿಷೇದಾಜ್ಞೆ ಜಾರಿ ಹಿನ್ನೆಲೆ ಮಾಲ್ದಾರೆ ಬಳಿ ಪೊಲೀಸರು ತಡೆ ಒಡ್ಡಿದ್ದು, ಆಕ್ರೋಶಗೊಂಡ ಹೋರಾಟಗಾರರು ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.
ರಸ್ತೆ ಬದಿಯಲ್ಲೇ ಉರಿ ಬಿಸಿಲಿನಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭ ದಿಡ್ಡಳ್ಳಿಯಿಂದ ಕಾಲ್ನಡಿಗೆಯಲ್ಲಿ ಬಂದ ನಿರಾಶ್ರಿತ ಆದಿವಾಸಿಗಳು ಪ್ರತಿಭಟನೆಗೆ ಸಾಥ್ ನೀಡಿ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರನ್ನು ದಿಡ್ಡಳ್ಳಿಗೆ ತೆರಳದಂತೆ ತಡೆ ಒಡ್ಡಿರುವ ಜಿಲ್ಲಾಡಳಿತದ ವಿರುದ್ಧ ಆಕ್ರೋಷ ವ್ಯಕ್ತ ಪಡಿಸಿ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು. ಜಿಲ್ಲಾಡಳಿತ ಕೂಡಲೇ ಸೆ. 144 ತೆರವುಗೊಳಿಸಿ ದೊರೆಸ್ವಾಮಿ ಹಾಗೂ ಹೋರಾಟಗಾರರನ್ನು ದಿಡ್ಡಳ್ಳಿ ಪ್ರವೇಶಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಈ ವೇಳೆ ಪ್ರತಿಭಟನೆ ನಿರತರನ್ನು ಉದ್ದೇಶಿಸಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಮಾತನಾಡಿ, ದಿಡ್ಡಳ್ಳಿಯ ನ್ಯಾಯುತ ಹೋರಾಟಕ್ಕೆ ನಿಮ್ಮ ಜೊತೆ ಇರುವುದಾಗಿ ತಿಳಿಸಿದರು. ದಿಡ್ಡಳ್ಳಿಯವರಿಗೆ ಧೈರ್ಯ ತುಂಬುವ ಸಲುವಾಗಿ ಆಗಮಿಸಲು ಮುಂದಾದಾಗ ಸೆ.144 ಜಾರಿ ಇರಲಿಲ್ಲ. ಆದರೆ, ರವಿವಾರ ಬೆಂಗಳೂರಿನಿಂದ ಹೊರಡುವ ವೇಳೆ ಸೆ 144 ಜಾರಿ ಮಾಡಿರುವುದು ಪತ್ರಿಕೆಗಳ ಮೂಲಕ ತಿಳಿಯಿತು. ಬಳಿಕ ಜಿಲ್ಲಾದಿಕಾರಿಗಳ ಜೊತೆ ಮಾತನಾಡಿದಾಗ ದುಷ್ಟರು ಬಂದು ಕಾನೂನು ಸುವ್ಯವಸ್ಥೆ ಹದೆಗಡುತ್ತದೆ ಆದ್ದರಿಂದ ಸೆ 144 ಜಾರಿ ಮಾಡಿರುವುದಾಗಿ ತಿಳಿಸಿದ್ದಾರೆ. ಆದರೆ, ಜಿಲ್ಲಾಧಿಕಾರಿಗಳು ನಾವು ಬರುವುದನ್ನು ತಡೆಯಲು ಸೆ 144. ಜಾರಿ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳ ಈ ಕ್ರಮ ಸರಿಯಲ್ಲ. ಇದೀಗ ನಮ್ಮನ್ನು ಪೊಲೀಸರು ತಡೆದು ದಿಡ್ಡಳ್ಳಿಗೆ ನಾಲ್ಕು ಜನ ಹೋಗಬಹುದು ಎಂದಿದ್ದಾರೆ. ಆದರೆ ಹೋಗುವುದಾದರೆ ಹೋರಾಟಗಾರರೆಲ್ಲರಿಗೂ ಪ್ರವೇಶ ನೀಡಬೇಕೆಂದು ಆಗ್ರಹಿಸಿದಾಗ, ಇದಕ್ಕೆ ಪೊಲೀಸರು ನಿರಾಕರಿಸಿ ತಡೆದಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳು ಫೋನ್ ಕರೆಮಾಡಿ ಎರಡು ದಿನದಲ್ಲಿ ಸಭೆ ನಡೆಸಿ ಸಮಸ್ಯೆ ಬಗೆ ಹರಿಸುವುದಾಗಿ ತಿಳಿಸಿದ್ದಾರೆ ಎಂದು ದೊರೆಸ್ವಾಮಿ ತಿಳಿಸಿದರು.







