ಖ್ಯಾತ ವೈದ್ಯ ಡಾ.ಎಸ್.ಆರ್.ಉಳ್ಳಾಲ್ ನಿಧನ

ಮಂಗಳೂರು, ಫೆ.13: ನಗರದ ಖ್ಯಾತ ವೈದ್ಯ ಎಸ್.ಆರ್.ಉಳ್ಳಾಲ್ (ಡಾ.ಸದಾಶಿವ ರಾವ್ ಉಳ್ಳಾಲ್) ಫೆ.9ರಂದು ನಿಧನ ಹೊಂದಿದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.
ಇಂಗ್ಲೆಂಡಿನ ರಾಯಲ್ ಕಾಲೇಜಿನಲ್ಲಿ ಗೌರವಾನ್ವಿತ ಹುದ್ದೆ ಅಲಂಕರಿಸಿದ್ದ ಕರ್ನಾಟಕದ ಮೊದಲ ವೈದ್ಯ ಎಂಬ ಖ್ಯಾತಿಗೆ ಎಸ್.ಆರ್.ಉಳ್ಳಾಲ್ ಪಾತ್ರರಾಗಿದ್ದರು. ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಕಾರ್ಡಿಯೋಥೋರಾಸಿಕ್ ಸರ್ಜರಿ ವಿಭಾಗದಲ್ಲಿ ಪ್ರೊಫೆಸರ್ ಆಗಿ 10 ವರ್ಷ ಸೇವೆ ಸಲ್ಲಿಸಿದ ಬಳಿಕ ನಿವೃತ್ತಿಯಾಗಿದ್ದರು.
ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದ್ದ ಎಸ್.ಆರ್. ಉಳ್ಳಾಲ್ ಬಳಿಕ ಮುಂಬೈಗೆ ತೆರಳಿ ಅಲ್ಲಿನ ಜೆ.ಡಿ. ಹಾಸ್ಪಿಟಲ್‌ನಲ್ಲಿ ಎಂಬಿಬಿಎಸ್ ಮತ್ತು ಎಂ.ಎಸ್. ಶಿಕ್ಷಣ ಮುಗಿಸಿದ್ದರಲ್ಲದೆ ಇಂಗ್ಲೆಂಡಿನಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಇಂಗ್ಲೆಂಡಿನಲ್ಲಿರುವಾಗಲೇ ಹೃದಯಶಸ್ತ್ರಚಿಕಿತ್ಸಾ ಸ್ಪೆಷಲಿಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಇಂಗ್ಲೆಂಡಿನ ಹೇರ್‌ಫೀಲ್ಡ್ ಹಾಸ್ಪಿಟಲ್‌ನಲ್ಲಿ ವೃತ್ತಿ ಜೀವನದ ಬಳಿಕ ಅಮೆರಿಕಾಕ್ಕೆ ತೆರಳಿ ಅಲ್ಲಿ ಎರಡು ವರ್ಷಗಳ ಕಾಲ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದರು. ಸುಮಾರು 1 ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಎಸ್.ಆರ್.ಉಳ್ಳಾಲ್ ನಗರದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಮೃತರು ಪತ್ನಿ ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.





