ದಲಿತ ಕೇಶವ ಅಸಹಜ ಸಾವು : ತನಿಖೆಗೆ ಆಗ್ರಹ-ಪ್ರತಿಭಟನೆಯ ಎಚ್ಚರಿಕೆ

ಕೇಶವ
ಪುತ್ತೂರು,ಫೆ.13: ಪುತ್ತೂರು ತಾಲ್ಲೂಕಿನ ಸುಳ್ಯಪದವಿನಲ್ಲಿರುವ ಬಾರ್ನ ಜಗಲಿಯಲ್ಲಿ ಕಳೆದ ಜ.4ರಂದು ದಲಿತ ಸಮುದಾಯಕ್ಕೆ ಸೇರಿದ ಕೇಶವ ಎಂಬವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂಬುವುದು ಸುಳ್ಳು ಮಾಹಿತಿಯಾಗಿದ್ದು, ಕೇಶವ ಅವರರನ್ನು ಬಾರ್ನ ಕೆಲಸದಾಳುಗಳು ಹೊಡೆದು,ಅವರ ಮರ್ಮಾಂಗಕ್ಕೆ ತುಳಿದು ಕೊಲೆ ಮಾಡಿದ್ದಾರೆ. ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಆರೋಪಿಗಳ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಸೌಹಾರ್ದ ವೇದಿಕೆಯ ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಆಗ್ರಹಿಸಿದ್ದಾರೆ.
ಪುತ್ತೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಶವ ಅವರ ಸಾವಿನ ಪ್ರಕರಣವನ್ನು ಒಂದು ವಾರದೊಳಗೆ ಮರು ತನಿಖೆ ನಡೆಸಿ ತಪ್ಪಿತಸ್ಥರನ್ನು ಗುರುತಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಬಾರ್ನ ಪರವಾನಿಗೆಯನ್ನು ರದ್ದುಗೊಳಿಸಬೇಕು. ಇಲ್ಲದಿದ್ದಲ್ಲಿ ದಲಿತರು, ಊರಿನ ನಾಗರಿಕರು ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬಾರ್ನ ಮುಂಬಾಗ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಕರ್ನಾಟಕ ಕೇರಳ ಗಡಿ ಪ್ರದೇಶದಲ್ಲಿರುವ ಕೇರಳದ ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಗ್ರಾಮದ ಬಜ ನಿವಾಸಿ,ದಲಿತ ಸಮುದಾಯಕ್ಕೆ ಸೇರಿದ ಕೇಶವ (35) ಕೊಲೆಯಾದವರು. ಕಳೆದ ಜ.4ರಂದು ಕೇಶವ ಅವರಿಗೆ ವಿನ್ಯಾಸ್ ಬಾರ್ನ ಕೆಲಸದಾಳುಗಳು ಹೊಡೆದು,ಜಾತಿ ನಿಂದನೆ ಮಾಡಿ ಅಲ್ಲಿಂದ ಓಡಿಸಿದ್ದರು. ಈ ವಿಚಾರವನ್ನು ಕೇಶವ ಅವರು ತನ್ನ ಪತ್ನಿ ಸುಮಿತ್ರ ಅವರಲ್ಲಿ ಹೇಳಿದ್ದರು. ಈ ಕುರಿತು ಜ.9ರಂದು ವಿಚಾರಿಸಲೆಂದು ಬಾರ್ಗೆ ತೆರಳಿದ ಕೇಶವ ಅವರನ್ನು ಅಲ್ಲಿನ ಕೆಲಸದಾಳುಗಳು ಹೊಡೆದು ,ಮರ್ಮಾಂಗಕ್ಕೆ ತುಳಿದು ಕೊಲೆ ಮಾಡಿದ್ದಾರೆ.
ಇದನ್ನು ನೋಡಿರುವ ಅಕ್ಕಪಕ್ಕದ ಸಾರ್ವಜನಿಕರು ಹಾಗೂ ಗ್ರಾಹಕರು ಬಾರ್ನವರ ದೌರ್ಜನ್ಯ ಮತ್ತು ದಬ್ಬಾಳಿಕೆಯಿಂದ ಹೆದರಿ ಓಡಿದ್ದಾರೆ. ಈ ಕುರಿತು ಸಮಗ್ರ ತನಿಖೆಯಾದಲ್ಲಿ ಸತ್ಯಾಂಶ ಹೊರಬರಲಿದೆ ಎಂದು ಅವರು ತಿಳಿಸಿದರು. ಕೇಶವ ಅವರು ಮೃತಪಟ್ಟಿರುವ ವಿಚಾರ ತಿಳಿದ ಅವರ ತಂದೆ ಬಾಬು ಅವರು ಬಾರ್ಗೆ ತೆರಳಿದಾಗ ಜಗಲಿಯಲ್ಲಿ ಮೃತದೇಹವಿತ್ತು. ಬಾರ್ನ ಕೆಲಸದಾಳುಗಳು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ್ದು, ಶವದ ಮರಣೋತ್ತರ ಪರೀಕ್ಷೆ ಮಾಡದಂತೆ ಬಾರ್ನ ಮಾಲಕರು ಒತ್ತಡ ಹಾಕಿದ್ದಾರೆ. ಆದರೂ ಬಾಬು ಅವರು ಮರಣೋತ್ತರ ಪರೀಕ್ಷೆ ನಡೆಯಲೇ ಬೇಕು ಎಂದು ಒತ್ತಾಯಿಸಿದ ಕಾರಣ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ತನ್ನ ಪುತ್ರನನ್ನು ಹೊಡೆದು,ಮರ್ಮಾಂಗಕ್ಕೆ ತುಳಿದು ಕೊಲೆ ಮಾಡಿರುವ ಕುರಿತು ಬಾಬು ಅವರು ಜಿಲ್ಲಾ ಎಸ್ಪಿ ಅವರಲ್ಲಿ ತನ್ನ ಅಳಲನ್ನು ತೋಡಿಕೊಂಡಿದ್ದಾರೆ. ಅಲ್ಲದೆ ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿಗಳಿಗೆ, ಗೃಹ ಸಚಿವರಿಗೆ ,ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ , ಐಜಿಪಿಯವರಿಗೆ ಮನವಿ ಸಲ್ಲಿಸಿ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡುವಂತೆ ಹಾಗೂ ಬಡಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.
ಆದರೂ ಈತನಕ ಯಾವುದೇ ತನಿಖೆ ನಡೆಸಿಲ್ಲ. ಆಸ್ಪತ್ರೆಯಿಂದ ಮರಣೋತ್ತರ ಪರೀಕ್ಷೆಯ ವರದಿಯನ್ನು ಕಳುಹಿಸಲಾಗಿದ್ದರೂ ಪೊಲೀಸರು ಇನ್ನೂ ವರದಿ ಬಂದಿಲ್ಲ ಎಂದು ಹೇಳುತ್ತಿದ್ದಾರೆ ಎಂದ ಅವರು ಒಂದು ವಾರದೊಳಗೆ ಸಂಬಂಧಪಟ್ಟವರು ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳಲು ಮುಂದಾಗದಿದ್ದರೆ ಬಡ ಕುಟುಂಬದ ಪರವಾಗಿ ಹೋರಾಟ ಆರಂಭಿಸುವುದು ಅನಿವಾರ್ಯವಾಗುವುದು ಎಂದು ಎಚ್ಚರಿಸಿದ್ದಾರೆ.
ಹಲ್ಲೆ ನಡೆಸಿದ್ದನ್ನು ತನ್ನಲ್ಲಿ ಹೇಳಿದ್ದರು.....
ಮೃತ ಕೇಶವ ಅವರ ಪತ್ನಿ ಸುಮಿತ್ರಾ ಅವರು ಮಾತನಾಡಿ ಜ.4ರಂದು ವಿನ್ಯಾಸ್ ಬಾರ್ಗೆ ಹೋಗಿದ್ದ ತನ್ನ ಪತಿಗೆ ಅಲ್ಲಿನ ಕೆಲಸದಾಳುಗಳು ಸಿಕ್ಕಾಪಟ್ಟೆ ಹೊಡೆದು ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದರು. ಈ ವಿಚಾರವನ್ನು ಪತಿಯವರು ತನ್ನಲ್ಲಿ ಹೇಳಿಕೊಂಡಿದ್ದರು, ಇದನ್ನು ಪ್ರಶ್ನಿಸಲು ಹೋದ ಪತಿಯನ್ನು ಅಲ್ಲಿನ ಕೆಲಸದಾಳುಗಳು ಸೇರಿಕೊಂಡು ಹೊಡೆದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಮಂಡಲ ಪಂಚಾಯತ್ ಸದಸ್ಯ ಅಂಬೋಡಿ ಅಮ್ಚಿನಡ್ಕ, ಮೃತ ಕೇಶವ ಅವರ ತಂದೆ ಬಾಬು ಬಜ ಇದ್ದರು.







