ಮುಂಡೂರು ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ-ಆರೋಪ
ಮಾರಾಟಗಾರರಿಂದ ಹಣ ಪಡೆಯುವ ಅಬಕಾರಿ ಅಧಿಕಾರಿಗಳು !

ಪುತ್ತೂರು,ಫೆ.13: ಪುತ್ತೂರು ತಾಲೂಕಿನ ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಚ್ಚಿನ ಕಡೆಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು ಇದರಿಂದ ಜನ ಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ, ಕ್ರಮ ಕೈಗೊಳ್ಳಿ ಎಂದು ಅಬಕಾರಿ ಇಲಾಖೆಗೆ ಮಾಹಿತಿ ನೀಡಿದರೆ ಅವರು ಬಂದು ಮದ್ಯ ಮಾರಾಟಗಾರರಿಂದ ಹಣ ಪಡೆದು ತೆರಳುತ್ತಾರೆ ಎಂದು ಮುಂಡೂರು ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆರೋಪಿಸಿದರು.
ಸಭೆಯು ಗ್ರಾ.ಪಂ ಅಧ್ಯಕ್ಷ ಎಸ್.ಡಿ ವಸಂತ ಅವರ ಅಧ್ಯಕ್ಷತೆಯಲ್ಲಿ ಫೆ.10ರಂದು ಮುಂಡೂರು ಸಿ.ಎ ಬ್ಯಾಂಕ್ ಸಭಾ ಭವನದಲ್ಲಿ ನಡೆಯಿತು. ಅಬಕಾರಿ ಇಲಾಖೆಯವರು ಗ್ರಾಮ ಸಭೆಗಳಿಗೂ ಬರುವುದಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು ಅಬಕಾರಿಯವರು ದಾಳಿ ನಡೆಸಿ ಅಕ್ರಮ ಮದ್ಯ ಪತ್ತೆ ಮಾಡಿದ್ದು ಎಲ್ಲೂ ನಮಗೆ ಗೊತ್ತಿಲ್ಲ, ಅಕ್ರಮ ಮದ್ಯ ಮಾರಾಟದ ವಿರುದ್ದ ನಾವು ಪೊಲೀಸ್ ಇಲಾಖೆಗೆ ದೂರು ನೀಡಿದ್ದೇವೆ ಆದರೆ ಪೊಲೀಸ್ ಇಲಾಖೆಯನ್ನು ಕ್ರಮಕೈಗೊಳ್ಳದಂತೆ ಅಬಕಾರಿ ಇಲಾಖೆಯವರು ಮಾಡುತ್ತಿದ್ದಾರೆ ಎಂದರು. ಅಬಕಾರಿ ಇಲಾಖೆಯ ವಿರುದ್ದ ನಿರ್ಣಯ ಕೈಗೊಂಡು ಸರಕಾರಕ್ಕೆ ಮಾಹಿತಿ ನೀಡಬೇಕು, ಇಲ್ಲವಾದರೆ ಇಲಾಖೆಯ ವಿರುದ್ದ ಹೋರಾಟ ಅನಿವಾರ್ಯವಾದೀತು ಗ್ರಾಮಸ್ಥರು ಎಚ್ಚರಿಸಿದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಅಕ್ರಮ ಮದ್ಯ ಮಾರಾಟ ನಿಂತರೆ ಸಮಾಜದಲ್ಲಿ ಅಪರಾಧಗಳು ಘಟಿಸುವುದಿಲ್ಲ. ಗ್ರಾಮ ಸಭೆಗೆ ಕರೆದರೆ ಅಬಕಾರಿ ಇಲಾಖೆಯವರು ಬರುತ್ತಿಲ್ಲ, ಗ್ರಾಮಸ್ಥರಿಗೆ ಮಾರಕವಾಗಿರುವ ಅಬಕಾರಿ ಇಲಾಖೆಯ ವಿರುದ್ದ ಸರಕಾರಕ್ಕೆ ಬರೆದುಕೊಳ್ಳುವುದಾಗಿ ನಿರ್ಣಯ ಮಾಡುವುದಾಗಿ ಗ್ರಾಮಸ್ಥರಿಗೆ ಮಾಹಿತಿ ನೀಡಿದರು.
ತ್ಯಾಜ್ಯ ಎಸೆಯುವವರ ವಿರುದ್ದ ಕ್ರಮ ಕೈಗೊಳ್ಳಿ:
ಮುಂಡೂರು ಗ್ರಾ.ಪಂ ವ್ಯಾಪ್ತಿಯ ಹಲವು ಕಡೆಗಳಲ್ಲಿ ತ್ಯಾಜ್ಯ ಎಸೆಯಲಾಗುತ್ತಿದೆ, ನೀರಿನ ಟ್ಯಾಂಕ್ ಇರುವ ಕಡೆಗಳಲ್ಲಿಯೂ ಕೋಳಿ ತ್ಯಾಜ್ಯವನ್ನು ಹಾಕುತ್ತಿದ್ದಾರೆ ಇದರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ತ್ಯಾಜ್ಯ ಹಾಕುವವರನ್ನು ಗ್ರಾಮಸ್ಥರೇ ಗಮನಿಸಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಗ್ರಾಮಸ್ಥರ ಮಾಹಿತಿಯನ್ನು ಗೌಪ್ಯವಾಗಿಡುವ ಮೂಲಕ ಆರೋಪಿಗಳ ವಿರುದ್ದ ಕ್ರಮಕೈಗೊಳ್ಳುವುದಾಗಿ ಪೊಲೀಸರು ಸಭೆಗೆ ತಿಳಿಸಿದರು. ಮುಂಡೂರು ಪೇಟೆಯಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಸಿ ಸಿ ಕೆಮರಾ ವ್ಯವಸ್ಥೆ ಮಾಡುವ ಮೂಲಕ ದುಷ್ಟ ಶಕ್ತಿಗಳ ನಿಯಂತ್ರಣಕ್ಕೆ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಪೊಲೀಸ್ ಇಲಾಖೆಯವರು ಮಾಹಿತಿ ನೀಡಿದರು.
ಸಂಶಯಕ್ಕೆ ಎಡೆ ಮಾಡಿದ ಮರ ಸಾಗಾಟ:
ಅರಣ್ಯ ಇಲಾಖೆಯ ಅಧಿಕಾರಿಯವರು ಮಾಹಿತಿ ನೀಡುತ್ತಿದ್ದ ವೇಳೆ ಗ್ರಾಮಸ್ಥ ರಾಧಾಕೃಷ್ಣ ಅವರು ಮಾತನಾಡಿ ಮರದ ವಿಚಾರದಲ್ಲಿ ಕೋಟಿ ಕೋಟಿ ಲೆಕ್ಕಾಚಾರ ಹೇಳುತ್ತೀರಿ ಆದರೆ ಪರಿಸರದ ದೃಷ್ಟಿಯಿಂದ ಒಂದು ಮರವನ್ನಾದರೂ ಅರಣ್ಯ ಇಲಾಖೆ ನೆಟ್ಟಿದೆಯೇ ಎಂದು ಪ್ರಶ್ನಿಸಿದರು.
ತಾ.ಪಂ ಸದಸ್ಯ ಶಿವರಂಜನ್ ಮಾತನಾಡಿ ಪಂಜಳ, ಮುಂಡೂರು ಮತ್ತಿತರ ಕಡೆಗಳಿಂದ ದಿನಾಲೂ ಪಿಕಪ್ ಹಾಗೂ ಲಾರಿಗಳಲ್ಲಿ ನಿರಾತಂಕವಾಗಿ ಮರಗಳ ಸಾಗಾಟ ಮಾಡಲಾಗುತ್ತಿದ್ದು ಹಲವು ಸಂಶಯಗಳು ನಮ್ಮನ್ನು ಕಾಡುತ್ತಿದೆ ಎಂದರು. ಸಾಗಾಟ ಮಾಡುವ ಮತಗಳಿಗೆ ಪರ್ಮಿಶನ್ ಇದೆಯೇ ಅಥವಾ ಇಲ್ಲದೆಯೇ ಸಾಗಾಟ ಮಾಡಲಾಗುತ್ತಿದೆಯೇ ಎಂದು ಅವರು ಪ್ರಶ್ನಿಸಿದರು. ಮರಗಳ ಅಕ್ರಮ ಸಾಗಾಟದ ಶಂಕೆ ಇರುವುದರಿಂದ ಅರಣ್ಯ ಇಲಾಖೆ ತುಸು ಅಲರ್ಟ್ ಆಗಿ ಇರಬೇಕಾದ ಅವಶ್ಯಕತೆ ಇದೆ ಎಂದು ಶಿವರಂಜನ್ ಹೇಳಿದರು.
ಅಪಪ್ರಚಾರಕ್ಕೆ ಕಿವಿಗೊಡಬೇಡಿ - ವೈದ್ಯೆ ಖತೀಜ ದಿಲ್ಶಾದ್
ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಖತೀಜ ದಿಲ್ಶಾದ್ ಮಾತನಾಡಿ ದಡಾರ ಹಾಗೂ ರುಬೆಲ್ಲೋ ಚುಚ್ಚುಮದ್ದು ವಿಚಾರವಾಗಿ ವ್ಯಾಪಕ ಅಪಪ್ರಚಾರ ನಡೆಯುತ್ತಿದ್ದು ಅದಕ್ಕೆ ಪೋಷಕರು ಕಿವಿಗೊಡದೆ ತಮ್ಮ ಮಕ್ಕಳಿಗೆ ಚುಚ್ಚುಮದ್ದು ಹಾಕಿಸಿಕೊಳ್ಳಿ ಎಂದು ಹೇಳಿದರು. ಮಕ್ಕಳ ಹಿತದೃಷ್ಟಿಯಿಂದ ಚುಚ್ಚು ಮದ್ದು ಕೊಡಲಾಗುತ್ತಿದ್ದು ಇದನ್ನು ಯಾರಿಗೂ ಬಲತ್ಕಾರವಾಗಿ ಕೊಡಲಾಗುತ್ತಿಲ್ಲ, ಯಾರೋ ಮಾಡುವ ಅಪಪ್ರಾಚರವನ್ನು ನಂಬಿ ತಮ್ಮ ಮಕ್ಕಳಿಗೆ ಚುಚ್ಚುಮದ್ದು ಹಾಕಿಸದೇ ಇದ್ದರೆ ಅದು ನಿಮಗೇ ನಷ್ಟ ಎಂದು ಅವರು ಹೇಳಿದರು.ಪಶು ವೈದ್ಯಾಧಿಕಾರಿ ಪ್ರಸನ್ನ ಕುಮಾರ್ ಹೆಬ್ಬಾರ್ ಚರ್ಚಾ ನಿಯಂತ್ರಣಾಧಿಕಾರಿಯಾಗಿದ್ದರು.
ವೇದಿಕೆಯಲ್ಲಿ ಗ್ರಾ.ಪಂ ಸದಸ್ಯರಾದ ಶಿವನಾಥ ರೈ ಮೇಗಿನಗುತ್ತು, ರಾಮಚಂದ್ರ ಸೊರಕೆ, ಮಹೇಶ್ಚಂದ್ರ ಸಾಲ್ಯಾನ್, ಬಾಲಕೃಷ್ಣ ಪೂಜಾರಿ, ಹಂಝ ಎಲಿಯ, ಶೀನಪ್ಪ ನಾಯ್ಕ, ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್, ಹೊನ್ನಮ್ಮ, ಸೀತಾ, ಸಾವಿತ್ರಿ, ಮೀನಾಕ್ಷಿ, ಕುಸುಮ, ಉದಯಕುಮಾರ್ ಬಾಕುಡ ಉಪಸ್ಥಿತರಿದ್ದರು. ಪಿಡಿಓ ಸುಜಾತಾ ಕೆ ವರದಿ ಹಾಗೂ ಲೆಕ್ಕ ಪತ್ರಗಳನ್ನು ಮಂಡಿಸಿದರು. ಶಿವನಾಥ ರೈ ಮೇಗಿನಗುತ್ತು ಸ್ವಾಗತಿಸಿ ವಂದಿಸಿದರು.







