ಫೆ.18-22 : ಆಳ್ವಾಸ್‌ನಲ್ಲಿ ರಾಷ್ಟ್ರೀಯ ಬಾಲ್‌ಬ್ಯಾಡ್ಮಿಂಟನ್ ಪಂದ್ಯ
ಮೂಡುಬಿದಿರೆ,ಫೆ.13: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಎಂ.ಕೆ. ಅನಂತ್ರಾಜ್ ಸ್ಮಾರಕ 62ನೇ ರಾಷ್ಟ್ರೀಯ ಸೀನಿಯರ್ ಬಾಲ್‌ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಫೆ. 18ರಿಂದ 22ರ ವರೆಗೆ ವಿದ್ಯಾಗಿರಿಯಲ್ಲಿ ನಡೆಯಲಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ ಬಾಲ್‌ಬ್ಯಾಡ್ಮಿಂಟನ್ ಸಂಸ್ಥೆಯ ಸಹಯೋಗದೊಂದಿಗೆ ನಡೆಯಲಿರುವ ಈ ಪದ್ಯಾವಳಿ ಬಾರತೀಯ ಬಾಲ್‌ಬ್ಯಾಡ್ಮಿಂಟನ್ ಫೆಡರೇಶನ್‌ನ ನಿರ್ದೇಶನದಲ್ಲಿ ನಡೆಯಲಿದೆ. ರಾಷ್ಟ್ರದ ಸುಮಾರು 33 ಪುರುಷರ , 28 ಮಹಿಳಾ ತಂಡಗಳು ಹೆಸರಾಂತ ಭಾರತೀಯ ರೈಲ್ವೇಸ್, ಮೇಜರ್ ಸ್ಪೋರ್ಟ್ಸ್, ಇಸ್ರೊ ಮೊದಲಾದ ತಂಡಗಳು ಭಾಗವಹಿಸಲಿದ್ದು ಸುಮಾರು 700ಮಂದಿ ಕ್ರೀಡಾಪಟುಗಳು ಹಾಗೂ 300ಮಂದಿ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಮೂಡುಬಿದಿರೆಯ ಹೆಸರಾಂತ ಬಾಲ್‌ಬ್ಯಾಡ್ಮಿಂಟನ್ ಆಟಗಾರ ದಿ. ಎಂ. ಕೆ. ಅನಂತ್ರಾಜ್ ಅವರ ಸ್ಮರಣಾರ್ಥವಾಗಿ ಈ ಚಾಂಪಿನ್‌ಶಿಪ್‌ನ್ನು ಆಯೋಜಿಸಲಾಗಿದೆ.
ಈ ಪಂದ್ಯಾವಳಿಗಾಗಿ ಈಗಾಗಲೇ 8 ಆವೆಮಣ್ಣಿನ ಕ್ರೀಡಾಂಗಣಗಳನ್ನು ಸಿದ್ಧಪಡಿಸಲಾಗಿದ್ದು ಕಾಮಗಾರಿ ಅಂತಿಮ ಹಂತದಲ್ಲಿದೆ. ಕ್ರೀಡಾಪಟುಗಳಿಗೆ ಹಾಗೂ ಅಧಿಕಾರಿಗಳಿಗೆ ಸಂಸ್ಥೆಯ ವಿವಿಧ ಹಾಸ್ಟೆಲ್ ಹಾಗೂ ವಸತಿ ಗೃಹಗಳಲ್ಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಚಾಂಪಿಯನ್‌ಶಿಪ್‌ನ್ನು ಆಯೋಜಿಸಲು ರಾಜ್ಯ ಸರ್ಕಾರವು 10ಲಕ್ಷ ಘೋಷಿಸಿದ್ದು ಕೆನರಾಬ್ಯಾಂಕ್, ಎಂಆರ್‌ಪಿಎಲ್, ಅದಾನಿ ಗ್ರೂಫ್ ಸಹಕಾರವನ್ನು ನೀಡಲಿದೆ. ಪ್ರಸ್ತುತ ಶಿಕ್ಷಣ ಸಂಸ್ಥೆಯಲ್ಲಿ 18 ವಿವಿಧ ಕ್ರೀಡೆಗಳಿಗಾಗಿ ಉಚಿತ ಶಿಕ್ಷಣ ಯೋಜನೆಯಲ್ಲಿ 800ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಅಂತರಾಷ್ಟ್ರೀಯ ಕ್ರೀಡೆಗಳೊಂದಿಗೆ ದೇಶೀಯ ಹಾಗೂ ಗ್ರಾಮೀಣ ಕ್ರೀಡೆಗಳಿಗೆ ವಿಶೇಷವಾದ ಪ್ರೋತ್ಸಾಹವನ್ನು ನೀಡಾಗುತ್ತಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಾಲ್‌ಬ್ಯಾಡ್ಮಿಂಟನ್ ಸಂಸ್ಥೆಯ ಕಾರ್ಯದರ್ಶಿ ದಿನೇಶ್, ಉಪಾಧ್ಯಕ್ಷರಾದ ಮಹಾದೇವ, ರಾಮಕೃಷ್ಣ, ರಾಜ್ಯ ತರಬೇತುದಾರ ಜಿ.ಬಿ.ನಾಗರಾಜ್, ಹಿರಿಯ ಆಟಗಾರ ಮಂಜುನಾಥ್, ಚಾಂಪಿಯನ್‌ಶಿಪ್‌ನ ಸಂಘಟನಾ ಕಾರ್ಯದರ್ಶಿ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.







