ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ‘ಅತ್ಯುತ್ತಮ ಶಾಲೆ’ ಪ್ರಶಸ್ತಿ ವಿತರಣೆ

ಕೊಣಾಜೆ,ಫೆ.13: ನಿಟ್ಟೆ ಶಿಕ್ಷಣ ಸಂಸ್ಥೆ ಮತ್ತು ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಜಂಟಿ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೈಕ್ಷಣಿಕ ಸಾಧನೆಗೈದ ಗ್ರಾಮೀಣ ಪ್ರದೇಶದ ಪ್ರೌಢಶಾಲೆಗಳಿಗೆ ನೀಡಲ್ಪಡುವ ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ‘ಅತ್ಯುತ್ತಮ ಶಾಲೆ’ ಪ್ರಶಸ್ತಿ 15ಲಕ್ಷ ರೂ. ನಗದು ಬಹುಮಾನವನ್ನು ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆ ಮತ್ತು ವೇಣೂರು ಸರಕಾರಿ ಪ್ರೌಢಶಾಲೆಗೆ 10ಲಕ್ಷ ರೂ. ನಗದು ಬಹುಮಾನ ವಿತರಿಸಲಾಯಿತು.
ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಡಿಟೋರಿಯಂನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅತ್ಯುತ್ತಮ ಶಾಲಾ ಪ್ರಶಸ್ತಿ ನೀಡಿ ಗೌರವಿಸಿ, ಆಶೀರ್ವಚನ ನೀಡಿದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಮನುಷ್ಯನ ಜೀವನದಲ್ಲಿ ಶಿಕ್ಷಣ ಅತಿಮುಖ್ಯ. ಬದುಕಿಗೆ ಅತ್ಯಗತ್ಯವಾದ ಆಧ್ಯಾತ್ಮಿಕ ಶಿಕ್ಷಣ ಎನ್ನುವುದು ಶುದ್ಧ ವಿಜ್ಞಾನವಾಗಿದ್ದು ಅದನ್ನು ಆಧುನಿಕ ಶಿಕ್ಷಣದೊಂದಿಗೆ ಬೊಧಿಸುವ ಕಾರ್ಯ ಶಿಕ್ಷಕರಿಂದಾಗಬೇಕು ಎಂದು ನುಡಿದರು.
ಕೆಲವು ದಶಕಗಳ ಹಿಂದೆ ಮೈಸೂರು ಪ್ರಾಂತ್ಯದಲ್ಲಿ ಸಾಕ್ಷರತೆ ಕೇವಲ 5ಶೇ. ಇತ್ತು. ಖಾಸಗಿ ಹಾಗೂ ಸರಕಾರಿ ಶಾಲಾ ವ್ಯವಸ್ಥೆಯಿಂದ ಸದ್ಯ 76ಶೇ. ತಲುಪಿದೆ. ಖಾಸಗಿ ಸಂಸ್ಥೆಗಳು ಸಮಾಜಕ್ಕೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕನ್ನಡ ಮಾಧ್ಯಮ ಅದರಲ್ಲೂ ಸರಕಾರಿ ಶಾಲೆಗಳನ್ನು ಗುರುತಿಸಿ ಆ ಶಾಲೆಗೆ ಆರ್ಥಿಕ ಸಹಾಯವನ್ನು ಮಾಡುವ ಮೂಲಕ ನಿಟ್ಟೆ ಶಿಕ್ಷಣ ಸಂಸ್ಥೆಯು ಕತ್ತಲಿನಲ್ಲಿರು ವವರಿಗೆ ಬೆಳಕನ್ನು ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ನಮ್ಮ ದೇಶದ ಭದ್ರತೆ, ಆಭಿವೃದ್ಧಿ ಎಲ್ಲವೂ ನಮ್ಮ ವಿದ್ಯಾರ್ಥಿಗಳು. ಮುಂದೆ ದೇಶವನ್ನು ಮುನ್ನಡೆಸುವವರು. ಹಾಗಾಗಿ ಆ ಮಕ್ಕಳಿಗೆ ಹಣ ಗಳಿಸುವ ಶಿಕ್ಷಣ ನೀಡಿದರೆ ಅದು ವಿದ್ಯಾರ್ಥಿಗಳ ಅವರ ಮುಂದಿನ ಬದುಕಿಗೆ ಪೂರಕವಾಗದು. ಅಂತಹ ಶಿಕ್ಷಣ ಪಡೆದ ಮಕ್ಕಳು ತಮ್ಮ ವೈಯಕ್ತಿಕ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಣ್ಣ ಸಣ್ಣ ಸಮಸ್ಯೆಗಳನ್ನು ಎದುರಿಸಲಾಗದ ಸ್ಥಿತಿಗೆ ತಲುಪುತ್ತಾರೆ. ಹಾಗಾಗಿ ದೇಶಪ್ರೇಮ ಮೂಡಿಸುವ ಜ್ಞಾನ ಕೊಡುವ ಕೌಶಲ್ಯ ವೃದ್ಧಿಸುವ ಮಾನವೀಯ ಮೌಲ್ಯಗಳನ್ನು ಬಿತ್ತರಿಸುವ ಶಿಕ್ಷಣ ಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕವಾಗಿ ಪ್ರಗತಿ ಆಭಿವೃದ್ಧಿ ದಾಖಲಿಸಿರುವ ಬೆಳ್ತಂಗಡಿಯ ನಡ ಸರಕಾರಿ ಪ್ರೌಢಶಾಲೆಗೆ ಒಂದು ಲಕ್ಷ ರೂ. ನಗದು ಮತ್ತು ಮೂಡುಬಿದಿರೆಯ ತಾಕೊಡೆಯ ಆದರ್ಶ ಪ್ರೌಢಶಾಲೆಗೆ ಎರಡು ಲಕ್ಷ ರೂ. ಆರ್ಥಿಕ ನೆರವಿನ ಚೆಕ್ ವಿತರಿಸಲಾಯಿತು.
ನಿಟ್ಟೆ ವಿವಿ ಕುಲಾಪತಿ ಎನ್.ವಿನಯ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಹಾಸನ ಶ್ರೀ ಆದಿಚುಂಚನಗಿರಿ ಮಠದ ಶ್ರೀ ಶಂಭೂನಾಥ ಸ್ವಾಮೀಜಿ, ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ, ನಿಟ್ಟೆ ವಿವಿ ಸಹ ಕುಲಾಪತಿ ಪ್ರೊ.ಡಾ. ಶಾಂತಾರಾಮ ಶೆಟ್ಟಿ, ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಡಾ.ಎನ್.ಆರ್. ಶೆಟ್ಟಿ, ಮಂಗಳೂರು ವಿವಿ ಉಪ ಕುಲಪತಿ ಪ್ರೊ.ಕೆ.ಭೈರಪ್ಪ, ಡಿಡಿಪಿಐ ವಾಲ್ಟರ್ ಡಿಮೆಲ್ಲೊ, ಟ್ರಸ್ಟಿಗಳಾದ ಬಿ.ಆರ್.ಹೆಗ್ಡೆ ಹಾಗೂ ಗುರುಪ್ರಸಾದ್ ಅಡ್ಯಂತಾಯ ಉಪಸ್ಥಿತರಿದ್ದರು.
ಹಣಕಾಸು ವಿಭಾಗ ನಿರ್ದೇಶಕ ರಾಜೇಂದ್ರ ಎಂ. ಸ್ವಾಗತಿಸಿದರು. ಪಠ್ಯೇತರ ವಿಭಾಗ ನಿರ್ದೇಶಕ ಪ್ರೊ. ರಾಜಶೇಖರ್ ಎಂ. ಕಾರ್ಯಕ್ರಮ ನಿರೂಪಿಸಿದರು. ನಿಟ್ಟೆ ವಿವಿ ಕುಲಸಚಿವ ಡಾ. ಎಂ.ಎಸ್. ಮೂಡಿತ್ತಾಯ ವಂದಿಸಿದರು.







