ಆದಾಯ ಇಲಾಖೆಯಿಂದ 1.42ಲಕ್ಷ ಕೋಟಿ ರೂ. ಮರುಪಾವತಿ

ಹೊಸದಿಲ್ಲಿ, ಫೆ.13: ಪ್ರಸಕ್ತ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಇಲಾಖೆಯು ಫೆಬ್ರವರಿ 10ರ ತನಕ ಒಟ್ಟು 1.42 ಲಕ್ಷ ಕೋಟಿ ರೂ.ಗಳನ್ನು ಆದಾಯತೆರಿಗೆ ಪಾವತಿದಾರರಿಗೆ ಮರುಪಾವತಿಸಿದ್ದು, ಇದು ಕಳೆದ ಸಾಲಿಗಿಂತ ಶೇ.41.5ರಷ್ಟು ಆಧಿಕವಾಗಿದೆ.
ತೆರಿಗೆ ಇಲಾಖೆಯ ಸಂಸ್ಕರಣಾ ಕೇಂದ್ರ(ಸಿಪಿಸಿ) ಈಗಾಗಲೇ 4.19 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ಐಟಿ ರಿಟರ್ನ್ಸ್‌ಗಳನ್ನು ಪರಿಷ್ಕರಿಸಿದ್ದು, ಈವರ್ಷದ ಫೆಬ್ರವರಿ 10ರವರೆಗೆ ಅದು 1.62 ಲಕ್ಷ ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಈಪೈಕಿ 1.42 ಲಕ್ಷ ಕೋಟಿ ರೂ.ಗಳನ್ನು ಮರುಪಾವತಿಸಿದೆ ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ.
ಸಣ್ಣ ತೆರಿಗೆಪಾವತಿದಾರರಿಗೆ ಮರುಪಾವತಿಯನ್ನು ತ್ವರಿತಗೊಳಿಸಲು ಹೆಚ್ಚು ಆದ್ಯತೆ ನೀಡಿರುವ ಹಿನ್ನೆಲೆಯಲ್ಲಿ , ಬಿಡುಗಡೆಗೊಳಿಸಲಾದ ಶೇ.92ರಷ್ಟು ಮರುಪಾವತಿ (ರಿಫಂಡ್)ಗಳು 50 ಸಾವಿರ ರೂ.ಗಿಂತ ಕಡಿಮೆ ಮೊತ್ತದವು ಎಂದು ಅದು ಹೇಳಿದೆ. 50 ಸಾವಿರ ರೂ.ಗಿಂತ ಕಡಿಮೆ ಮೊತ್ತದ ಕೇವಲ ಶೇ.2ರಷ್ಟು ರಿಫಂಡ್‌ಗಳು ಮಾತ್ರವೇ ಬಿಡುಗಡೆಗೆ ಬಾಕಿಯಿರುವುದಾಗಿ ಅದು ಹೇಳಿದೆ. ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಸಂವಹನವನ್ನು ಸಾಧಿಸಲು ತೆರಿಗೆಪಾವತಿದಾರರು ಅಧಿಕೃತ ವೆಬ್‌ಸೈಟ್‌ನ ಇ-ಫೈಲಿಂಗ್ ವಿಭಾಗದಲ್ಲಿ ತಮ್ಮ ಇಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ ಮಾಡುವಂತೆಯೂ ಅದು ತಿಳಿಸಿದೆ.
ಮರುಪಾವತಿಗಳನ್ನು ತ್ವರಿತಗೊಳಿಸಲು ಇಲಾಖೆಯು ಒತ್ತು ನೀಡಿರುವ ಪರಿಣಾಮವಾಗಿ, ಶೇ.92ರಷ್ಟು ಎಲ್ಲಾ ಐಟಿ ರಿಟರ್ನ್‌ಗಳು 60 ದಿನಗಳೊಳಗೆ ಪರಿಷ್ಕರಿಸಲ್ಪಟ್ಟಿದೆಯೆಂದು ವರದಿ ಹೇಳಿದೆ. 2017ರ ಫೆಬ್ರವರಿ 10ರವರೆಗೆ ಸುಮಾರು 4.01 ಲಕ್ಷ ಕೋಟಿ ರೂ. ಆದಾಯ ತೆರಿಗೆ ರಿಟರ್ನ್‌ಗಳಾಗಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಇದು ಹಿಂದಿನ ವರ್ಷಕ್ಕಿಂತ ಶೇ.20ರಷ್ಟು ಹೆಚ್ಚೆಂದು ಇಲಾಖೆ ತಿಳಿಸಿದೆ. ಪ್ರಸಕ್ತ ವಿತ್ತವರ್ಷದ ಎಪ್ರಿಲ್-ಜನವರಿ ಒಟ್ಟು ನೇರ ತೆರಿಗೆ ಸಂಗ್ರಹವು 5.82 ಲಕ್ಷ ಕೋಟಿ ರೂ. ಆಗಿದ್ದು, ಶೇ.10.79ರಷ್ಟು ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.







